►ಕೇಂದ್ರ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದ ಹೈಕೋರ್ಟ್
ನವದೆಹಲಿ: ಸಸ್ಯಾಹಾರಿ ಎಂದು ಮಾರಾಟವಾಗುವ ಪತಂಜಲಿ ಹರ್ಬಲ್ ಟೂತ್ ಪೌಡರ್ ‘ದಿವ್ಯ ಮಂಜನ್’ನಲ್ಲಿ ಮಾಂಸಾಹಾರಿ ಅಂಶಗಳಿವೆ ಎಂದು ಆರೋಪಿಸಿ ದೆಹಲಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಲಾಗಿದೆ.
ಪ್ರಕರಣದ ವಿಚಾರಣೆ ನಡೆಸಿರುವ ಹೈಕೋರ್ಟ್ ಪತಂಜಲಿ ಕಂಪನಿ ಮತ್ತು ಕೇಂದ್ರ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.
ವಕೀಲ ಯತಿನ್ ಶರ್ಮಾ ಅವರು ಅರ್ಜಿ ಸಲ್ಲಿಸಿದ್ದು, ಪತಂಜಲಿಯ ದಿವ್ಯ ಮಂಜನ್ ಪ್ಯಾಕೇಜಿಂಗ್ ಸಸ್ಯಾಹಾರಿ ಉತ್ಪನ್ನಗಳನ್ನು ಸೂಚಿಸುವ ಹಸಿರು ಚುಕ್ಕೆಯನ್ನು ಹೊಂದಿದೆ. ಹೀಗಾಗಿ ನಾನು ದೀರ್ಘಕಾಲದಿಂದ ಬಳಸುತ್ತಿದ್ದೇನೆ. ಆದರೆ ಈ ಹಲ್ಲಿನ ಪುಡಿಯಲ್ಲಿ ಸೆಪಿಯಾ ಅಫಿಷಿನಾಲಿಸ್ ಅಥವಾ ಮೀನಿನ ಸಾರ ಇದೆ ಎಂದು ಸಂಶೋಧನೆಯೊಂದು ಹೇಳಿದೆ.
‘ದಿವ್ಯ ಮಂಜನ್’ನಲ್ಲಿ ಸಮುದ್ರಫೆನ್ ಪ್ರಾಣಿ ಆಧಾರಿತ ಉತ್ಪನ್ನವಾಗಿದೆ ಎಂದು ರಾಮ್ ದೇವ್ ಸ್ವತಃ ಯೂಟ್ಯೂಬ್ ವೀಡಿಯೊದಲ್ಲಿ ಒಪ್ಪಿಕೊಂಡಿದ್ದಾರೆ.
ಇದು ಮಿಸ್ ಬ್ರಾಂಡಿಂಗ್ ಮತ್ತು ಡ್ರಗ್ಸ್ ಮತ್ತು ಕಾಸ್ಮೆಟಿಕ್ಸ್ ಕಾಯ್ದೆಯ ಉಲ್ಲಂಘನೆಯಾಗಿದೆ. ಗ್ರಾಹಕರ ಧಾರ್ಮಿಕ ನಂಬಿಕೆಗಳು ಹಾನಿಯಾಗಿದೆ. ಈ ಸಂಶೋಧನೆಯು ತನಗೆ ಮತ್ತು ಕುಟುಂಬಕ್ಕೆ ವಿಶೇಷವಾಗಿ ದುಃಖಕರವಾಗಿದೆ ಎಂದು ಶರ್ಮಾ ತಮ್ಮ ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.