ಚಲಿಸುತ್ತಿದ್ದ ರೈಲಿನಿಂದ ಬಾಲಕನನ್ನು ಹೊರಕ್ಕೆಸೆದ ಪ್ರಯಾಣಿಕ: ವೀಡಿಯೋ ವೈರಲ್

Prasthutha|

ಕೋಲ್ಕತ್ತಾ: ಪರಸ್ಪರ ನಡೆದ ಗಲಾಟೆಯ ಹಿನ್ನೆಲೆಯಲ್ಲಿ ಚಲಿಸುತ್ತಿದ್ದ ರೈಲಿನಿಂದ ಪ್ರಯಾಣಿಕನೊಬ್ಬ ಬಾಲಕನನ್ನು ಹೊರಕ್ಕೆಸೆದಿರುವ ಘಟನೆ ಪಶ್ಚಿಮ ಬಂಗಾಳದಿಂದ ವರದಿಯಾಗಿದೆ. ಈ ಕುರಿತ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

- Advertisement -

ಹೌರಾ- ಮಾಲ್ಡಾ ಟೌನ್ ಇಂಟರ್’ಸಿಟಿ ಎಕ್ಸ್’ಪ್ರೆಸ್’ನಲ್ಲಿ ಬಿರ್ಭೂಮ್ ಜಿಲ್ಲೆಯ ತಾರಾಪಿತ್ ರಸ್ತೆ – ರಾಮ್’ಪುರಹತ್ ನಿಲ್ದಾಣಗಳ ಮಧ್ಯೆ ಈ ಘಟನೆ ನಡೆದಿದೆ. ಇದಕ್ಕೆ ಸಂಬಂಧಿಸಿದಂತೆ ರೈಲ್ವೇ ಪೊಲೀಸರು ಒಬ್ಬನನ್ನು ಬಂಧಿಸಿದ್ದಾರೆ. ಇನ್ನೂ ಕೆಲವರು ಈ ಕೃತ್ಯದಲ್ಲಿ ಭಾಗಿಯಾಗಿರುವ ಶಂಕೆಯನ್ನು ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.

ಸಜಲ್ ಶೇಖ್ ಎಂಬಾತನನ್ನು ರೈಲಿನಿಂದ ಹೊರಕ್ಕೆ ಎಸೆಯಲಾಗಿದ್ದು, ಈತ ಮಹಿಳೆಯರು ಸೇರಿದಂತೆ ಇತರ ಪ್ರಯಾಣಿಕರನ್ನು ನಿಂದಿಸಿದ್ದಾನೆ, ಇತರ ಪ್ರಯಾಣಿಕರ ಸೀಟಿನ ಮೇಲೆ ತನ್ನ ಕಾಲನ್ನು ಇಟ್ಟು ತೊಂದರೆ ನೀಡಿದ್ದಾನೆ ಮತ್ತು ಬೆದರಿಕೆ ಹಾಕಿದ್ದಾನೆ ಎಂದು ಆರೋಪಿಸಲಾಗಿದೆ.

- Advertisement -

ಬಾಲಕನ ವರ್ತನೆಯಿಂದ ಆಕ್ರೋಶಿತಗೊಂಡ ಪ್ರಯಾಣಿಕನೊಬ್ಬ ಆತನಲ್ಲಿ ಜಗಳಕ್ಕಿಳಿದಿರುವುದು ವೀಡಿಯೋದಲ್ಲಿ ಸೆರೆಯಾಗಿದೆ. ತೀವ್ರ ಗಲಾಟೆಯ ಬಳಿಕ ಶೇಖ್’ನನ್ನು ರೈಲಿನಿಂದ ಹೊರಕ್ಕೆ ತಳ್ಳಿರುವುದು ವೀಡಿಯೋದಲ್ಲಿ ಕಾಣಿಸಿದೆ.

ಘಟನೆಯಲ್ಲಿ ಶೇಖ್ ಎಂಬಾತನಿಗೆ ಗಂಭೀರವಾಗಿ ಗಾಯಗೊಂಡಿದ್ದು, ರಾಮಪುರಹತ್ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಹೇಳಲಾಗಿದೆ.

ಘಟನೆ ಕುರಿತು ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಿದ್ದಾರೆ.

Join Whatsapp