ಮುಂಬೈ: ಮುಂಬೈಯ ಹೊರ ವಲಯದಲ್ಲಿ ಲಿವ್ ಇನ್ ಟುಗೆದರ್ ಸಂಬಂಧದಲ್ಲಿದ್ದ 37ರ ಹರೆಯದ ಮಹಿಳೆಯನ್ನು ಕೊಲೆ ಮಾಡಿರುವ ಆಕೆಯ ಸಂಗಾತಿ ಆಕೆಯ ಮೃತದೇಹವನ್ನು ಬಾಡಿಗೆ ಮನೆಯ ಬೆಡ್ ಅಡಿಯ ಬಾಕ್ಸ್’ನಲ್ಲಿ ಅಡಗಿಸಿಟ್ಟಿರುವುದು ಪತ್ತೆಯಾಗಿದೆ.
ಕೊಲೆಗಾರ ಹಾರ್ದಿಕ್ ಶಾ ಮುಂಬೈಯ ನೆರೆಯ ಪಲ್ಗರ್ ಜಿಲ್ಲೆಯಿಂದ ಪರಾರಿಯಾಗಲು ಪ್ರಯತ್ನಿಸಿದನಾದರೂ ರೈಲ್ವೆ ಪೊಲೀಸರು ಆತನನ್ನು ಬಂಧಿಸಿದ್ದಾರೆ.
ಹಾರ್ದಿಕ್ ನಿರುದ್ಯೋಗಿಯಾಗಿದ್ದ, ನರ್ಸ್ ಆಗಿದ್ದ ಮೇಘಾ ಕೆಲಸ ಮಾಡಿ ಮನೆ ನಡೆಸುತ್ತಿದ್ದಳು. ಈ ಕಾರಣಕ್ಕೆ ಅವರ ನಡುವೆ ಆಗಾಗ ಜಗಳ ನಡೆಯುತ್ತಿತ್ತು ಮತ್ತು ಅದು ಕೊಲೆಯಲ್ಲಿ ಕೊನೆಗಂಡಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೇಘಾಳನ್ನು ಕೊಂದ ಬಳಿಕ ಹಾರ್ದಿಕ್ ಮನೆಯ ಕೆಲವು ವಸ್ತುಗಳನ್ನು ಮಾರಾಟ ಮಾಡಿ ಹಣದೊಡನೆ ಪರಾರಿಯಾಗಲು ತಯಾರಾಗಿದ್ದ. ಪೊಲೀಸರಿಗೆ ಮಾಹಿತಿ ತಿಳಿದು ಅವರು ಆತನು ಪ್ರಯಾಣಿಸುತ್ತಿರುವ ರೈಲಿನ ಬಗ್ಗೆ ಮಾಹಿತಿ ನೀಡಿದರು. ರೈಲ್ವೆ ಪೊಲೀಸರು ಆತನನ್ನು ಮಧ್ಯ ಪ್ರದೇಶದ ನಗ್ದಾದಲ್ಲಿ ವಶಕ್ಕೆ ಪಡೆದಿದ್ದಾರೆ.
ಮುಂಬೈಯ ಒಂದು ಅಪರಾಧ ಪತ್ತೆ ಪೊಲೀಸ್ ತಂಡವು ಆತನನ್ನು ವಶಕ್ಕೆ ತೆಗೆದುಕೊಳ್ಳಲು ನಗ್ದಾಕ್ಕೆ ಹೊರಟಿದೆ.
ಹಾರ್ದಿಕ್ ಮತ್ತು ಮೇಘಾ ಮೂರು ವರ್ಷಗಳಿಂದ ಸಂಪರ್ಕದಲ್ಲಿದ್ದರು, ಕಳೆದ ಆರು ತಿಂಗಳುಗಳಿಂದ ಲಿವಿಂಗ್ ಟುಗೆದರ್ ಸಂಗಾತಿಗಳಾಗಿದ್ದರು ಹಾಗೂ ತಿಂಗಳ ಹಿಂದಷ್ಟೇ ಕೊಲೆ ನಡೆದ ಬಾಡಿಗೆ ಮನೆಗೆ ಹೋಗಿದ್ದರು. ನೆರೆಹೊರೆಯವರು ಆಗಾಗ ಅವರು ಜಗಳವಾಡುತ್ತಿದ್ದುದರ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.