ಹೊಸದಿಲ್ಲಿ: ಕರ್ನಾಟಕ ಮೂಲದ ಬೆಟ್ಟ ಕುರುಬ ಸಮುದಾಯಕ್ಕೆ ಎಸ್ಟಿ ಸ್ಥಾನಮಾನ ನೀಡುವ ಪರಿಷ್ಕೃತ ಎಸ್ಟಿ ಪಟ್ಟಿಯನ್ನು ಲೋಕಸಭೆಯಲ್ಲಿ ಕೇಂದ್ರ ಸರಕಾರ ಶುಕ್ರವಾರ ಮಂಡಿಸಿದೆ.
ಮೈಸೂರು, ಚಾಮರಾಜನಗರ, ಕೊಡಗು ಸುತ್ತಲಿನ ಪ್ರದೇಶಗಳಲ್ಲಿ ವಾಸವಿರುವ ಬೆಟ್ಟ ಕುರುಬ ಸಮುದಾಯಕ್ಕೆ ಪರಿಶಿಷ್ಟ ಪಂಗಡ ಸ್ಥಾನಮಾನ ನೀಡುವ ಪರಿಷ್ಕೃತ ಎಸ್ಟಿ ಪಟ್ಟಿಯನ್ನು ಲೋಕಸಭೆಯಲ್ಲಿ ಮಂಡಿಸಲಾಗಿದೆ.
ಕೇಂದ್ರ ಬುಡಕಟ್ಟು ವ್ಯವಹಾರಗಳ ಸಚಿವ ಅರ್ಜುನ್ ಮುಂಡಾ ಸಂವಿಧಾನ (ಪರಿಶಿಷ್ಟ ಪಂಗಡ) ಆದೇಶ, 1950ಕ್ಕೆ ತಿದ್ದುಪಡಿ ತರುವ ಮಸೂದೆ ಯನ್ನು ಮಂಡಿಸಿದ್ದಾರೆ.
ಇದರಲ್ಲಿ ಈಗಾಗಲೇ ಎಸ್ಟಿ ಪಟ್ಟಿಯಲ್ಲಿರುವ ಕರ್ನಾಟಕದ ಕಾಡು ಕುರುಬರೇ ಬೆಟ್ಟ ಕುರುಬರು ಎಂಬುದನ್ನು ಸೇರಿಸಲಾಗಿದೆ. ಹೀಗಾಗಿ ಲೋಕಸಭೆ ಮತ್ತು ರಾಜ್ಯಸಭೆಗಳಲ್ಲಿ ಮಸೂದೆ ಅಂಗೀಕಾರವಾದ ಬಳಿಕ ಕಾಯ್ದೆಯಾಗಿ ಬದಲಾಗಲಿದೆ.
ಕರ್ನಾಟಕ ಮಾತ್ರವಲ್ಲದೆ ತಮಿಳುನಾಡು, ಹಿಮಾಚಲ ಪ್ರದೇಶ ಮತ್ತು ಛತ್ತೀಸ್ಗಢ ರಾಜ್ಯಗಳ ಕೆಲವು ಎಸ್ಟಿ ಸಮುದಾಯಗಳನ್ನು ಎಸ್ಟಿ ಪಟ್ಟಿಗೆ ಸೇರ್ಪಡೆ ಮಾಡುವ ಪ್ರಸ್ತಾವನೆಯನ್ನೂ ಇದೇ ತಿದ್ದುಪಡಿ ಮಸೂದೆಯಲ್ಲಿ ಸೇರ್ಪಡೆಗೊಳಿಸಲಾಗಿದೆ.