ಪ್ಯಾರಿಸ್ ಒಲಿಂಪಿಕ್ಸ್: ‘ಬೆಳ್ಳಿ’ಗೆ ಕೊರಳೊಡ್ಡಿದ ನೀರಜ್ ಚೋಪ್ರಾ

Prasthutha|

32 ವರ್ಷಗಳ ಬಳಿಕ ಪಾಕಿಸ್ತಾನಕ್ಕೆ ಒಲಿಂಪಿಕ್ಸ್ ಪದಕ

- Advertisement -

ಪ್ಯಾರಿಸ್: ಒಲಿಂಪಿಕ್ಸ್ 2024 ರ ಜಾವೆಲಿನ್ ಥ್ರೋ ಫೈನಲ್ ಪಂದ್ಯದಲ್ಲಿ ನೀರಜ್ ಚೋಪ್ರಾ ಬೆಳ್ಳಿ ಪದಕ ಗೆದ್ದಿದ್ದಾರೆ. ಬಂಗಾರದ ಪದಕವನ್ನು ಉಳಿಸಿಕೊಳ್ಳುವುದಕ್ಕೆ ಸಾಧ್ಯವಾಗಲಿಲ್ಲ. ಅವರ ಪ್ರತಿಸ್ಪರ್ಧಿ ಹಾಗೂ ನೆರೆಯ ಪಾಕಿಸ್ತಾನದ ಅರ್ಷದ್ ನದೀಮ್ ಒಲಿಂಪಿಕ್ಸ್ ದಾಖಲೆಯ 92.97 ಮೀಟರ್ ಎಸೆಯುವ ಮೂಲಕ ಬಂಗಾರ ಗೆದ್ದಿದ್ದಾರೆ.

ನೀರಜ್ ಚಿನ್ನ ಗೆಲ್ಲುತ್ತಾರೆಂಬ ಭಾರತದ ಕೋಟ್ಯಂತರ ಕ್ರೀಡಾಭಿಮಾನಿಗಳ ನಿರೀಕ್ಷೆ ಹುಸಿಯಾಗಿದೆ. ನೀರಜ್​ ಚೋಪ್ರಾ ಅವರ ಮೊದಲ ಎಸೆತವೇ ಪೌಲ್​. ಹೀಗಾಗಿ ಬೆಳ್ಳಿಪದಕಕ್ಕೆ ತೃಪ್ತರಾಗಬೇಕಾಯಿತು.

- Advertisement -

ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ ಇದು ಭಾರತಕ್ಕೆ 5ನೇ ಪದಕವಾಗಿದೆ. ಅಲ್ಲದೆ, ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ ನೀರಜ್ ಚೋಪ್ರಾ ಸತತ ಎರಡನೇ ಒಲಿಂಪಿಕ್ಸ್ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ.

ಭಾರೀ ಪೈಪೋಟಿಯಿಂದ ಕೂಡಿದ್ದ ಒಲಿಂಪಿಕ್ಸ್​ನ ಪುರುಷರ ಜಾವೆಲಿನ್ ಎಸೆತದ ಫೈನಲ್ ಪಂದ್ಯದಲ್ಲಿ ನೀರಜ್ ಚೋಪ್ರಾ 89.45 ಮೀ ದೂರ ಎಸೆದರು. 6 ಸುತ್ತುಗಳಲ್ಲಿ 4 ಬಾರಿ ಚೋಪ್ರಾ ಫೌಲ್​ ಆಗಿದ್ದೇ ಚಿನ್ನದ ಪದಕದಿಂದ ಅವರನ್ನು ಹಿಮ್ಮುಖವಾಗಿಸಿತು.

ಇದೇ ಸ್ಪರ್ಧೆಯಲ್ಲಿ ಕಳೆದ ಒಲಿಂಪಿಕ್ಸ್​ನಲ್ಲಿ ನಾಲ್ಕನೇ ಸ್ಥಾನ ಪಡೆದುಕೊಂಡಿದ್ದ ಪಾಕಿಸ್ತಾನದ ಅರ್ಷದ್ ನದೀಮ್ ಈ ಬಾರಿ ದಾಖಲೆಯ 92.97 ಮೀ. ದೂರ ಜಾವೆಲಿನ್ ಎಸೆದು ಇತಿಹಾಸ ನಿರ್ಮಿಸಿದ್ದಾರೆ. ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ. ಈ ಮೂಲಕ ಪಾಕಿಸ್ತಾನಕ್ಕೆ 32 ವರ್ಷಗಳ ಬಳಿಕ ಒಲಿಂಪಿಕ್ಸ್​ನಲ್ಲಿ ಪದಕವೊಂದು ದೊರಕಿದ್ದು, ಅದೂ ಚಿನ್ನ ದೊರಕಿದ್ದು ಪಾಕಿಸ್ತಾನದಲ್ಲಿ ಸಂಭ್ರಮ ಸೃಷ್ಟಿಸಿದೆ.

ಗ್ರೆನೆಡಾದ ಆಂಡರ್ಸನ್ ಪೀರ್ಟನ್ 88.87 ಮೀ. ಎಸೆತದೊಂದಿಗೆ ಕಂಚಿನ ಪದಕ ಗಳಿಸಿದರು.



Join Whatsapp