ಪ್ಯಾರಿಸ್: ಪ್ಯಾರಿಸ್ ಒಲಿಂಪಿಕ್ಸ್ 2024ರ ಕ್ರೀಡಾಕೂಟ ಮುಕ್ತಾಯವಾಗಿದ್ದು, ಭಾರತದ ಕಂಚಿನ ಪದಕಗಳ ಹೀರೋಗಳಾದ ಮನು ಭಾಕರ್ ಹಾಗೂ ಹಾಕಿ ಆಟಗಾರ ಶ್ರೀಜೇಶ್ ತ್ರಿವರ್ಣ ಧ್ವಜಧಾರಿಗಳಾಗಿ ಸಮಾರೋಪ ಸಮಾರಂಭದ ಪರೇಡ್ನಲ್ಲಿ ಪಾಲ್ಗೊಂಡಿದ್ದಾರೆ. ಬೃಹತ್ ಸಂಖ್ಯೆಯ ಕ್ರೀಡಾಭಿಮಾನಿಗಳು ಹಾಗೂ ಪ್ರೇಕ್ಷಕರ ಸಮ್ಮುಖದಲ್ಲಿ ನಡೆದ ಪರೇಡ್ನಲ್ಲಿ ಭಾರತೀಯ ತಾರೆಗಳು ಪಾಲ್ಗೊಂಡರು. ಆ ಬಳಿಕ ವರ್ಣರಂಜಿತ ಕಾರ್ಯಕ್ರಮಗಳು ನಡೆದವು.
ಅಮೆರಿಕ ಪದಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಪಂದ್ಯಾವಳಿ ಮುಕ್ತಾಯದ ಸನಿಹವರೆಗೂ ಚೀನಾ ನಂಬರ್ 1 ಸ್ಥಾನದಲ್ಲಿತ್ತು. ಕೂದಲೆಳೆಯ ಅಂತರದಿಂದ ಚೀನಾವನ್ನು ಹಿಂದಿಕ್ಕಿ ಅಮೆರಿಕ ಪದಕ ಪಟ್ಟಿಯಲ್ಲಿ ಸ್ಥಾನಕ್ಕೇರಿದೆ.
ಯುನೈಟೆಡ್ ಸ್ಟೇಟ್ಸ್ ಮತ್ತು ಫ್ರಾನ್ಸ್ ನಡುವಿನ ಮಹಿಳಾ ಬ್ಯಾಸ್ಕೆಟ್ಬಾಲ್ ಒಲಿಂಪಿಕ್ಸ್ನ ಕೊನೇ ಸ್ಪರ್ಧೆಯಾಗಿತ್ತು. ಅಲ್ಲಿ ತನಕ ಚೀನಾ 40 ಚಿನ್ನದೊಂದಿಗೆ ಮೊದಲ ಸ್ಥಾನದಲ್ಲಿತ್ತು. ಅಮೆರಿಕ ಬಾಸ್ಕೆಟ್ಬಾಲ್ ಗೆಲ್ಲುವುದರೊಂದಿಗೆ ಅಮೆರಿಕ 40 ಚಿನ್ನ ಗೆದ್ದುಕೊಂಡಿತು. ಜತೆಗೆ ಪದಕ ಪಟ್ಟಿಯಲ್ಲಿ ಬೆಳ್ಳಿ ಹಾಗೂ ಕಂಚಿನ ಸಹಾಯದಿಂದ ಅಗ್ರಸ್ಥಾನಕ್ಕೆ ಏರಿತು. ಈ ಮೂಲಕ ಅಮೆರಿಕನ್ನರು ಸತತ ನಾಲ್ಕನೇ ಬಾರಿಗೆ ಪದಕ ಪಟ್ಟಿಯಲ್ಲಿ ಅಗ್ರಸ್ಥಾನ ಉಳಿಸಿಕೊಂಡಂತಾಗಿದೆ. ಚೀನಾ ಚೀನಾ 40 ಚಿನ್ನದ ಪದಕಗಳು ಸೇರಿದಂತೆ 91 ಪದಕಗಳೊಂದಿಗೆ ಅಗ್ರ ಎರಡನೇ ಸ್ಥಾನ ಪಡೆಯಿತು.
ಭಾರತ 5 ಕಂಚು, 1 ಬೆಳ್ಳಿ ಸೇರಿದಂತೆ ಒಟ್ಟು 6 ಪದಕಗಳೊಂದಿಗೆ 71ನೇ ಸ್ಥಾನದಲ್ಲಿದೆ. ಪಾಕಿಸ್ತಾನ 44 ವರ್ಷಗಳ ಬಳಿಕ ಮೊದಲ ಬಾರಿಗೆ ಚಿನ್ನದ ಪದಕ ಗೆದ್ದು 62ನೇ ಸ್ಥಾನದಲ್ಲಿದ್ದು, ಭಾರತದಿಂದ ಮುಂದಿದೆ. ಭಾರತ ಕಳೆದ ಬಾರಿಗಿಂತಲೂ ಕಡಿಮೆ ಸಾಧನೆ ಮಾಡಿದೆ.
ಜಪಾನ್ 20 ಚಿನ್ನ ಸೇರಿದಂತೆ 45 ಪದಕಗಳೊಂದಿಗೆ ಅಗ್ರ ಮೂರನೇ ಸ್ಥಾನ ಪಡೆದರೆ, ಆತಿಥೇಯ ಫ್ರಾನ್ಸ್ 16 ಚಿನ್ನದ ಪದಕಗಳೊಂದಿಗೆ ಅಗ್ರ 5ನೇ ಸ್ಥಾನ ಪಡೆದಿದೆ.
ಭಾರತದ ಮನು ಭಾಕರ್ ಎರಡು ಕಂಚಿನ ಪದಕಗಳನ್ನು ಗೆದ್ದರೆ, ಸರಬ್ಜೋತ್ ಸಿಂಗ್, ಸ್ವಪ್ನಿಲ್ ಕುಸಲೆ, ಅಮನ್ ಸೆಹ್ರಾವತ್ ಮತ್ತು ಭಾರತೀಯ ಹಾಕಿ ತಂಡವು ತಲಾ ಒಂದು ಕಂಚಿನ ಪದಕವನ್ನು ಗೆದ್ದುಕೊಂಡಿತು. ಜಾವೆಲಿನ್ ಸ್ಟಾರ್ ನೀರಜ್ ಚೋಪ್ರಾ ಪ್ಯಾರಿಸ್ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕ ಗೆದ್ದಿದ್ದಾರೆ.