ಭೋಪಾಲ್: ಯುವತಿ ಹಾಗೂ ಆಕೆಯ ಪ್ರಿಯಕರನನ್ನು ಆಕೆಯ ಪೋಷಕರೇ ಹತ್ಯೆ ಮಾಡಿ ಮೊಸಳೆಗಳಿಗೆ ಎಸೆದ ಘಟನೆ ಮಧ್ಯಪ್ರದೇಶದ ಮೊರೆನಾದಲ್ಲಿ ನಡೆದಿದೆ.
ಆರೋಪಿಗಳು ಹೇಳಿದ ಚಂಬಲ್ ನದಿಯ ಪ್ರದೇಶದಲ್ಲಿ ಹುಡುಕಾಟ ನಡೆಯುತ್ತಿದ್ದು ಇಲ್ಲಿಯವರೆಗೂ ಯಾವುದೇ ಕುರುಹುಗಳು ಪತ್ತೆಯಾಗಿಲ್ಲ. ಘಟನೆ ಎರಡು ವಾರಗಳ ಹಿಂದೆ ನಡೆದಿದ್ದು, ಕೆಲವು ಸಂಬಂಧಿಕರ ಜೊತೆ ಸೇರಿ ಆರೋಪಿಗಳು ಯುವತಿ ಹಾಗೂ ಆಕೆಯ ಪ್ರಿಯಕರನನ್ನು ಗುಂಡು ಹಾರಿಸಿ ಕೊಂದಿದ್ದಾರೆ.
ಬಳಿಕ ನದಿಯಲ್ಲಿ ಮುಳುಗಿಸಿದ್ದಾರೆ. ಪ್ರಕರಣದಲ್ಲಿ ಮರ್ಯಾದ ಹತ್ಯೆಯ ಶಂಕೆ ವ್ಯಕ್ತವಾಗಿದೆ ಎಂದು ಮೊರೆನಾ ಎಸ್‍ಪಿ ಶೈಲೇಂದ್ರ ಸಿಂಗ್ ಚೌಹಾಣ್ ತಿಳಿಸಿದ್ದಾರೆ.
ರತನ್‍ಬಸಾಯಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಗ್ರಾಮದ ಶಿವಾನಿ (18) ಪಕ್ಕದ ಗ್ರಾಮದ ಬಲುಪುರ ನಿವಾಸಿ ರಾಧೇಶ್ಯಾಮ್ ತೋಮರ್ (21) ಎಂಬಾತನೊಂದಿಗೆ ಪ್ರೇಮ ಸಂಬಂಧ ಹೊಂದಿದ್ದರು. ಜಾತಿ ಸಮಸ್ಯೆಗಳಿಂದ ಯುವತಿ ಕುಟುಂಬದ ವಿರೋಧವಿತ್ತು ಎನ್ನಲಾಗಿದೆ.
ಜೂನ್ 3 ರಿಂದ ಹುಡುಗ ಮತ್ತು ಹುಡುಗಿ ಇಬ್ಬರೂ ನಾಪತ್ತೆಯಾಗಿದ್ದರು. ರಾಧೇಶ್ಯಾಮ್ ತೋಮರ್ ಅವರ ಕುಟುಂಬವು, ಯುವತಿಯ ಕುಟುಂಬದವರು ಅವರನ್ನು ಕೊಲೆ ಮಾಡಿದ್ದಾರೆ ಎಂದು ಈ ವೇಳೆ ಆರೋಪಿಸಿತ್ತು. ಯುವಕನ ಕುಟುಂಬ ಪೊಲೀಸರಿಗೆ ಕೊಲೆ ಬಗ್ಗೆ ಆರೋಪಿಸಿ ತನಿಖೆ ಮಾಡುವಂತೆ ಮನವಿ ಮಾಡಿದ್ದರೂ, ಆರಂಭದಲ್ಲಿ ಇಬ್ಬರೂ ಬೇರೆಲ್ಲೋ ಹೋಗಿರಬಹುದು ಎಂದು ಪೊಲೀಸರು ನಿರ್ಲಕ್ಷ್ಯ ಮಾಡಿದ್ದಾರೆ.
ಬಳಿಕ ಪದೇ ಪದೇ ಇದೇ ಆರೋಪವನ್ನು ಮಾಡಿದ ಮೇಲೆ ಪೊಲೀಸರು ತನಿಖೆಗೆ ಮುಂದಾಗಿದ್ದಾರೆ. ಬಳಿಕ ಪೊಲೀಸರು ಯುವತಿಯ ಕುಟುಂಬದವರನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಶವಗಳನ್ನು ನದಿಯಲ್ಲಿ ಎಸೆದು ಈಗಾಗಲೇ 15 ದಿನಗಳು ಕಳೆದಿವೆ. ಮೀನು ಮತ್ತು ಮೊಸಳೆಗಳಂತಹ ಜಲಚರಗಳು ಮೃತದೇಹಗಳನ್ನು ತಿಂದಿರುವ ಸಾಧ್ಯತೆ ಇದೆ. ಇದರಿಂದಾಗಿ ಮೃತದೇಹಗಳನ್ನು ಪತ್ತೆ ಮಾಡುವುದು ಕಷ್ಟದ ಕೆಲಸವಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಪ್ರಕರಣದಲ್ಲಿ 15 ಜನ ಭಾಗಿಯಾಗಿದ್ದಾರೆ. ಆದರೆ ಈವರೆಗೂ ಸೈಬರ್ ಪೊಲೀಸರಿಗಾಗಲಿ, ಗುಂಡು ಹಾರಿಸಿ ಕೊಲೆಗೈದಿರುವುದಕ್ಕೆ ಬಂದೂಕಿನ ಸಾಕ್ಷಿಯಾಗಲಿ ಪತ್ತೆಯಾಗಿಲ್ಲ. ಆದರೆ ಯುವತಿಯ ಪೋಷಕರು ಕೊಲೆಗೈದಿರುವುದಾಗಿ ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.