ಉಡುಪಿ: ಕಾರ್ಕಳ ತಾಲೂಕಿನ ಬೈಲೂರು ಸಮೀಪ ನಿರ್ಮಾಣ ಮಾಡಲಾದ ಪರಶುರಾಮನ ವಿಗ್ರಹ ಮಾಯವಾಗಿದ್ದು ಪಾದ ಮತ್ತು ಕಾಲು ಮಾತ್ರ ಉಳಿದಿದೆ. ವಿಗ್ರಹದ ಸೊಂಟದ ಮೇಲ್ಬಾಗ ಕಾಣೆಯಾಗಿದೆ ಎಂದು ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ.
ಪರಶುರಾಮನ ವಿಗ್ರಹ ಸ್ಥಾಪನೆ ಬಳಿಕ ಮೂರ್ತಿಯ ಸಾಚಾತನದ ಬಗ್ಗೆ ಸಾಕಷ್ಟು ಅನುಮಾನ ವ್ಯಕ್ತವಾಗಿದ್ದು, ಮೂರ್ತಿ ನೈಜತೆಯನ್ನು ಬಹಿರಂಗ ಪಡಿಸುವಂತೆ ಸಮಾನ ಮನಸ್ಕರು ಉಪವಾಸ ಸತ್ಯಾಗ್ರಹವನ್ನು ಹಮ್ಮಿಕೊಂಡಿದ್ದರು. ಅಲ್ಲದೆ, ಕಾಮಗಾರಿಯನ್ನು ಸ್ಥಗಿತಗೊಳಿಸುವಂತೆ ನ್ಯಾಯಾಲಯಕ್ಕೂ ಅರ್ಜಿ ಸಲ್ಲಿಸಲಾಗಿತ್ತು. ಬುಧವಾರ ಹೈಕೋರ್ಟ್ ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದೆ. ಇದರ ಬೆನ್ನಲ್ಲೇ ಪರಶುರಾಮ ವಿಗ್ರಹ ನಾಪತ್ತೆಯಾಗಿದೆ ಎಂಬ ದೂರು ಕಾರ್ಕಳ ನಗರ ಠಾಣೆಯಲ್ಲಿ ದಾಖಲಾಗಿದೆ.
ಮೂರ್ತಿ ಹುಡುಕಿಕೊಡುವಂತೆ ಆಗ್ರಹ
ಇದೀಗ ದ್ರೋಣ್ ಕ್ಯಾಮೆರಾ ಮೂಲಕ ಮೂರ್ತಿ ಮಾಯವಾಗಿರುವ ವಿಷಯ ಬಹಿರಂಗವಾಗಿದ್ದು, ಮೂರ್ತಿ ಹುಡುಕಿಕೊಡುವಂತೆ ದಿವ್ಯ ನಾಯಕ್ ಎಂಬವರು ನಗರ ಠಾಣೆಯ ಮೆಟ್ಟಿಲು ಏರಿದ್ದಾರೆ. ಮತ್ತೊಂದೆಡೆ ಫೈಬರ್ ಪ್ರತಿಮೆ ಸ್ಥಾಪಿಸಿ ದ್ರೋಹವೆಸಗಿದ್ದಾರೆ ಎಂದು ಆರೋಪಿಸಿ, ಶಾಸಕ ಸುನಿಲ್ ಕುಮಾರ್ ವಿರುದ್ಧ ಕಾರ್ಕಳ ಕಾಂಗ್ರೆಸ್ ಬೃಹತ್ ಪ್ರತಿಭಟನೆ ನಡೆಸಲು ಸಿದ್ಧತೆ ನಡೆಸಿದೆ.
ಈ ಥೀಮ್ ಪಾರ್ಕ್ 11.54 ಕೋಟಿ ರೂಗಳ ಯೋಜನೆಯಾಗಿದ್ದು ಅದರಲ್ಲಿ 5 ಕೋಟಿ ರೂ ವೆಚ್ಚದಲ್ಲಿ ಪರಶುರಾಮ ನ ಕಂಚಿನ ಮೂರ್ತಿ ಪ್ರತಿಷ್ಠಾಪನೆ ಮಾಡುವುದೆಂದು ನಿರ್ಧಾರ ಆಗಿತ್ತು. ಕಂಗೇರಿಯ ಪ್ರತಿಮೆ ತಯಾರಿ ಸಂಸ್ಥೆಯೊಂದಕ್ಕೆ ಇದರ ಕಾಂಟ್ರಾಕ್ಟ್ ನೀಡಲಾಗಿತ್ತು.
ಆದರೆ ಕಾಂಟ್ರಾಕ್ಟ್ ದಾರರಿಗೆ ಕೇವಲ 1 ಕೋಟಿ ರೂ ಅಷ್ಟೇ ಪಾವತಿಯಾಗಿದ್ದರಿಂದ ಅವರು ಅರ್ಧ ಮೂರ್ತಿಯನ್ನಷ್ಟೇ ನಿರ್ಮಿಸಿಕೊಟ್ಟಿದ್ದು, ಉಳಿದ ಭಾಗವನ್ನು ತರಾತುರಿಯಲ್ಲಿ ಫೈಬರ್ ನಿಂದ ನಿರ್ಮಿಸಲಾಗಿದೆ ಎಂಬ ಆರೋಪಿಸಲಾಗಿದೆ. ಇತ್ತೀಚೆಗಷ್ಟೇ ಇಲ್ಲಿಗೆ ಭೇಟಿ ನೀಡಿದ್ದ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ವಿಷಯ ತಿಳಿದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರು.