ಮುಂಬೈ: ಮುಂಬೈ ನ್ಯಾಯಾಲಯದಿಂದ ಅಪರಾಧಿ ಎಂದು ಘೋಷಿಸಲ್ಪಟ್ಟ ಮಾಜಿ ಪೊಲೀಸ್ ಕಮಿಷನರ್ ಪರಮ್ ಬೀರ್ ಸಿಂಗ್, ತನಿಖೆ ಎದುರಿಸುವ ನಿಟ್ಟಿನಲ್ಲಿ ಗುರುವಾರ ನಗರಕ್ಕೆ ಆಗಮಿಸಿದ್ದಾರೆ.
ನ್ಯಾಯಾಲಯದ ನಿರ್ದೇಶನದಂತೆ ತನಿಖೆಗೆ ಸಹಕರಿಸುತ್ತೇನೆ ಎಂದು ಸಿಂಗ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.
ಹಲವು ಸುಲಿಗೆ ಪ್ರಕರಣಗಳನ್ನು ಎದುರಿಸುತ್ತಿರುವ ಮಹಾರಾಷ್ಟ್ರದ ಐಪಿಎಸ್ ಅಧಿಕಾರಿ ಬುಧವಾರ ತಾನು ಚಂಡೀಗಢದಲ್ಲಿರುವುದಾಗಿ ತಿಳಿಸಿದ್ದರು. ಶಿಸ್ತುಕ್ರಮದ ಭಾಗವಾಗಿ ಮುಂಬೈ ಪೊಲೀಸ್ ಕಮಿಷನರ್ ಹುದ್ದೆಯಿಂದ ವರ್ಗಾವಣೆಗೊಂಡ ನಂತರ ಸಿಂಗ್, ಕಳೆದ ಮೇ ತಿಂಗಳಿನಿಂದ ಕರ್ತವ್ಯಕ್ಕೆ ಹಾಜರಾಗಿಲ್ಲ. ಮಾತ್ರವಲ್ಲ ಮಾಜಿ ಗೃಹ ಸಚಿವ ಅನಿಲ್ ದೇಶ್ ಮುಖ್ ವಿರುದ್ಧದ ಭ್ರಷ್ಟಾಚಾರದ ಆರೋಪದ ಹಿನ್ನೆಲೆಯಲ್ಲಿ ವಿಚಾರಣೆ ಎದುರಿಸುವಂತಾಗಿದೆ.
ಸದ್ಯ ಸುಪ್ರೀಮ್ ಕೋರ್ಟ್ ಮಧ್ಯಂತರ ಜಾಮೀನು ಪಡೆದಿರುವ ಸಿಂಗ್, ಬಂಧನದ ಭೀತಿಯಿಂದ ಹೊರ ಬಂದಿದ್ದಾರೆ. ಬೃಹತ್ ಕೈಗಾರಿಕೋದ್ಯಮಿ ಮುಖೇಶ್ ಅಂಬಾನಿ ಅವರ ನಿವಾಸ ಆಂಟಿಲ್ ಬಳಿ ಸ್ಫೋಟಕಗಳೊಂದಿಗೆ ಎಸ್.ಯು.ವಿ ಪತ್ತೆಯಾದ ಪ್ರಕರಣ ಮತ್ತು ಉದ್ಯಮಿ ಮನ್ಸುಖ್ ಹಿರೇನ್ ಅವರ ಅನುಮಾನಾಸ್ಪದ ಸಾವಿಗೆ ಸಂಬಂಧಿಸಿದಂತೆ ಮುಂಬೈ ಪೊಲೀಸ್ ಅಧಿಕಾರಿ ಸಚಿನ್ ವಝೆ ಅವರನ್ನು ಬಂಧಿಸಿದ ನಂತರ ವರ್ಗಾವಣೆ ಮಾಡಲಾಗಿದೆ ಎಂದು ಹೇಳಲಾಗಿದೆ.