ಪನ್ಸಾರೆ ಹತ್ಯೆ: ಆರೋಪಿಯ ಜಾಮೀನು ರದ್ದತಿಗೆ ಮಹಾರಾಷ್ಟ್ರ ಸರ್ಕಾರದ ಅನಾಸಕ್ತಿ- ಬಾಂಬೆ ಹೈಕೋರ್ಟ್ ಕಿಡಿ

Prasthutha|

ಮುಂಬೈ: ಮಹಾರಾಷ್ಟ್ರದ ಎಡಪಂಥೀಯ ರಾಜಕಾರಣಿ, ಲೇಖಕ ಗೋವಿಂದ್ ಪನ್ಸಾರೆ ಅವರನ್ನು ಹತ್ಯೆ ಮಾಡಿದ್ದ ಆರೋಪಿ ವೀರೇಂದ್ರ ಸಿನ್ಹ ತಾವಡೆ ಜಾಮೀನು ರದ್ದುಗೊಳಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ಮುಂದುವರೆಸಲು ತರಾತುರಿ ತೋರಿಸದ ಮಹಾರಾಷ್ಟ್ರ ಸರ್ಕಾರವನ್ನು ಬಾಂಬೆ ಹೈಕೋರ್ಟ್ ಮಂಗಳವಾರ ತೀವ್ರ ತರಾಟೆಗೆ ತೆಗೆದುಕೊಂಡಿದೆ.

- Advertisement -

ಸಂಬಂಧಪಟ್ಟ ಪ್ರಾಸಿಕ್ಯೂಟರ್ ಹಾಜರಿಲ್ಲದ ಕಾರಣ ಪ್ರಕರಣ ಮುಂದೂಡಬೇಕೆಂದು ಪಬ್ಲಿಕ್ ಪ್ರಾಸಿಕ್ಯೂಟರ್ ಕೋರಿದರು. ಈ ವೇಳೆ, 2018ರಲ್ಲಿಯೇ ಆರೋಪಿಯ ಜಾಮೀನು ರದ್ದುಗೊಳಿಸಲು ಕೋರಿ ರಾಜ್ಯ ಸರ್ಕಾರವೇ ಸಲ್ಲಿಸಿರುವ ಮನವಿಗೆ ಸಂಬಂಧಿಸಿದಂತೆ ಸರ್ಕಾರವೇ ಅದರ ಮುಂದೂಡಿಕೆ ಬಯಸುತ್ತಿರುವುದಕ್ಕೆ ನ್ಯಾ. ಎಸ್ ವಿ ಕೊತ್ವಾಲ್ ಅವರಿದ್ದ ಏಕಸದಸ್ಯ ಪೀಠ ಅಸಮಾಧಾನ ವ್ಯಕ್ತಪಡಿಸಿತು.

“ಜಾಮೀನು ರದ್ದತಿಗಾಗಿ ಇದು (ಪ್ರಕರಣ) 2018ರಿಂದ ಬಾಕಿ ಉಳಿದಿದೆ. ಜಾಮೀನು ರದ್ದು ಬಯಸುವುದೇ ಆದರೆ ಪ್ರಾಸಿಕ್ಯೂಷನ್ ತುರ್ತು ಕ್ರಮ ಕೈಗೊಳ್ಳಬೇಕು” ಎಂದು ನ್ಯಾಯಮೂರ್ತಿಗಳು ಸೂಚಿಸಿದರು. ಆದರೂ, ಕೊನೆಯ ಅವಕಾಶ ಎಂಬಂತೆ ನ್ಯಾಯಾಲಯ ಪ್ರಕರಣ ಮುಂದೂಡಿಕೆಗೆ ಅನುಮತಿ ನೀಡಿ ನವೆಂಬರ್ 22ಕ್ಕೆ ವಿಚಾರಣೆ ನಿಗದಿಪಡಿಸಿತು.

- Advertisement -

ಕೊಲ್ಹಾಪುರದಲ್ಲಿ ಪನ್ಸಾರೆ ಅವರ ಮೇಲೆ ಫೆಬ್ರವರಿ 2015 ರಲ್ಲಿ ಗುಂಡು ಹಾರಿಸಲಾಗಿತ್ತು. ಚಿಕಿತ್ಸೆ ಫಲಿಸದೆ ಕೆಲ ದಿನಗಳ ನಂತರ ಅವರು ಮೃತಪಟ್ಟಿದ್ದರು. 2016 ರಲ್ಲಿ ಮಹಾರಾಷ್ಟ್ರದ ಮತ್ತೊಬ್ಬ ಸಾಮಾಜಿಕ ಹೋರಾಟಗಾರ ನರೇಂದ್ರ ದಾಭೋಲ್ಕರ್ ಹತ್ಯೆ ಪ್ರಕರಣದಲ್ಲಿ ಸನಾತನ ಸಂಸ್ಥೆಯ ಅನುಯಾಯಿ ಎನ್ನಲಾದ ತಾವಡೆಯನ್ನು ಸಿಬಿಐ ಬಂಧಿಸಿತ್ತು.

ನಂತರ ಪ್ರಕರಣವನ್ನು ಮಹಾರಾಷ್ಟ್ರದ ಭಯೋತ್ಪಾದನಾ ನಿಗ್ರಹ ದಳಕ್ಕೆ ವರ್ಗಾಯಿಸಲಾಗಿತ್ತು. ಪ್ರಕರಣದ ವಿಚಾರಣೆ ಇನ್ನೂ ಪ್ರಾರಂಭವಾಗದ ಕಾರಣ 2018ರಲ್ಲಿ ಕೊಲ್ಹಾಪುರದ ಸೆಷನ್ಸ್ ನ್ಯಾಯಾಲಯವು ತಾವಡೆ ಅವರಿಗೆ ಜಾಮೀನು ನೀಡಿತ್ತು. ಇದಕ್ಕೆ ಸರ್ಕಾರ ಆಕ್ಷೇಪಿಸಿ ಆರೋಪಿಯ ಜಾಮೀನು ರದ್ದುಗೊಳಿಸುವಂತೆ ಮನವಿ ಮಾಡಿತ್ತು.

(ಕೃಪೆ: ಬಾರ್ & ಬೆಂಚ್)



Join Whatsapp