ಪಾಂಡವರಕಲ್ಲು : ಹಾವು ಕಡಿದು ಯುವಕ ಮೃತ್ಯು

Prasthutha|

ಬಂಟ್ವಾಳ: ತನ್ನ ಕೆಲಸದಲ್ಲಿ ನಿರತನಾಗಿದ್ದ ಸಂದರ್ಭದಲ್ಲಿ ಯುವಕನಿಗೆ ಹಾವು ಕಡಿದ ಪರಿಣಾಮ ಆತ ಮೃತಪಟ್ಟಿರುವ ಘಟನೆ ಬಂಟ್ವಾಳ ತಾಲೂಕಿನ ಪಾಂಡವರಕಲ್ಲು ಎಂಬಲ್ಲಿ ಮಂಗಳವಾರ ನಡೆದಿದೆ.

ಪಾಂಡವರಕಲ್ಲು ನಿವಾಸಿ ಉಸ್ಮಾನ್ ಎಂಬವರ ಪುತ್ರ ಮುಹಮ್ಮದ್ ಆಶಿದ್ (27) ಮೃತಪಟ್ಟ ಯುವಕ. ಆಶಿದ್ ಟಿಂಬರ್ ಕೆಲಸ ಮಾಡುತ್ತಿದ್ದು, ಇಂದು ಬೆಳಗ್ಗೆ ಆಶಿದ್ ಹಾಗೂ ಇತರರು ವಾಮದಪದವು ಬಳಿಯ ಮಾವಿನಕಟ್ಟೆ ಎಂಬಲ್ಲಿಗೆ ಕೆಲಸಕ್ಕೆ ಹೋಗಿದ್ದರು. ತಮ್ಮ ಕೆಲಸ ಮಾಡುತ್ತಿರಬೇಕಾದರೆ ಆಶಿದ್ ಅವರು ತಿಳಿಯದೆ ನಾಗರ ಹಾವಿಗೆ ತುಳಿದಿದ್ದಾರೆ. ತಕ್ಷಣ ಹಾವು ಅವರ ಕಾಲಿಗೆ ಎರಡು ಬಾರಿ ಕಚ್ಚಿದ್ದು, ಸ್ವಲ್ಪ ಹೊತ್ತಿನಲ್ಲೇ ಅವರು ಅಸ್ವಸ್ಥರಾಗಿದ್ದಾರೆ ಎಂದು ಅಲ್ಲಿದ್ದ ಕೆಲಸಗಾರರು ಹೇಳಿದ್ದಾರೆ.

- Advertisement -

ಅಲ್ಲಿದ್ದ ಕೆಲಸಗಾರರು ತಕ್ಷಣ ಅವರನ್ನು ಸ್ಥಳೀಯ ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ. ಆದರೆ ಆಸ್ಪತ್ರೆಯವರು ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿಗೆ ಕರೆದೊಯ್ಯುವಂತೆ ಸೂಚಿಸಿದ್ದರಿಂದ ಆಂಬುಲೆನ್ಸ್ ಮೂಲಕ ಮಂಗಳೂರಿನ ಕಂಕನಾಡಿ ಆಸ್ಪತ್ರೆಗೆ ಕರೆತರುತ್ತಿದ್ದಾಗ ಅಡ್ಯಾರು, ಕಣ್ಣೂರು ತಲುಪುವಾಗ ಮೃತಪಟ್ಟಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಅವಿವಾಹಿತನಾಗಿರುವ ಆಶಿದ್ ಉತ್ತಮ ಗುಣನಡತೆಯ ಯುವಕನಾಗಿದ್ದು, ಸ್ಥಳೀಯವಾಗಿ ಸಮಾಜ ಸೇವೆಯಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದ ಎಂದು ಗ್ರಾಮಸ್ಥರು ಮಮ್ಮಲ ಮರುಗಿದ್ದಾರೆ.

- Advertisement -