ನವದೆಹಲಿ: ಚುನಾವಣೆಯಲ್ಲಿ ತಾವು ಯಾವುದೇ ಪಕ್ಷವನ್ನೂ ಬೆಂಬಲಿಸುವುದಿಲ್ಲ ಎಂದು ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು) ನಾಯಕ ರಾಕೇಶ್ ಟಿಕಾಯತ್ ಹೇಳಿದ್ದಾರೆ. ಪಂಚರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಉದ್ಭವವಾಗಿರುವ ಹಲವು ಊಹಾಪೋಹಗಳ ಕುರಿತು ಸ್ಪಷ್ಟನೆ ನೀಡಿರುವ ರಾಕೇಶ್ ಟಿಕಾಯತ್, ರಾಜಕೀಯ ಪಕ್ಷಗಳಿಗೆ ಬೆಂಬಲ ನೀಡುವ ವರದಿಗಳನ್ನು ನಿರಾಕರಿಸಿದ್ದಾರೆ.
ಮಂಗಳವಾರ ಪರೇಡ್ ಮೈದಾನದಲ್ಲಿ ರೈತರ ಮೂರು ದಿನಗಳ ‘ಚಿಂತನ ಶಿಬಿರ’ದಲ್ಲಿ ಪಾಲ್ಗೊಳ್ಳಲು ಮಾಘಮೇಳಕ್ಕೆ ಆಗಮಿಸಿದ ಟಿಕಾಯತ್, ಈ ಚುನಾವಣೆಯಲ್ಲಿ ನಾವು ಯಾರನ್ನೂ ಬೆಂಬಲಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.ಅಂತೆಯೇ ರೈತರು ಮತ್ತು ಸಂಘಟನೆಗೆ ಸಂಬಂಧಿಸಿದ ವಿಷಯಗಳನ್ನು ಮೂರು ದಿನಗಳ ಚಿಂತನ ಮಂಥನದಲ್ಲಿ ಚರ್ಚಿಸಲಾಗಿದೆ. ಸರ್ಕಾರ ರೈತರಿಗೆ ನೀಡಿದ್ದ ಭರವಸೆಗಳನ್ನು ಈಡೇರಿಸಿಲ್ಲ ಎಂದು ಹೇಳಿದರು.
ಈ ಹಿಂದೆ ಉತ್ತರ ಪ್ರದೇಶದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ರಾಷ್ಟ್ರೀಯ ಲೋಕದಳ-ಸಮಾಜವಾದಿ ಪಕ್ಷದ ಮೈತ್ರಿಗೆ ಬೆಂಬಲ ನೀಡುವಂತೆ ಬಿಕೆಯು ಅಧ್ಯಕ್ಷ ನರೇಶ್ ಟಿಕೈತ್ ಮನವಿ ಮಾಡಿದ್ದರು. ಅದರ ಬೆನ್ನಲ್ಲೇ ಅವರು ಈ ಹೇಳಿಕೆ ನೀಡಿದ್ದಾರೆ.