ಬೆಳಗಾವಿ: ರಾಜ್ಯಾದ್ಯಂತ ಬಡವರಿಗೆ ಐದು ಲಕ್ಷ ಮನೆ ನಿರ್ಮಿಸಿಕೊಡುವ ಗುರಿ ಹೊಂದಿದ್ದು, ಶೀಘ್ರದಲ್ಲೇ ಪಂಚಾಯಿತಿವಾರು ಪಟ್ಟಿ ಬಿಡುಗಡೆ ಮಾಡಲಾಗುವುದು ಎಂದು ವಸತಿ ಸಚಿವ ವಿ.ಸೋಮಣ್ಣ ತಿಳಿಸಿದರು.
ವಿಧಾನ ಪರಿಷತ್ತಿನ ಪ್ರಶ್ನೋತ್ತರ ಅವಧಿಯಲ್ಲಿ ಕೆ.ಹರೀಶ್ ಕುಮಾರ್ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಎಸ್ಸಿ-ಎಸ್ಟಿ ಸೇರಿದಂತೆ ಎಲ್ಲಾ ವರ್ಗದ ಜನರಿಗೆ ಮನೆ ಹಂಚಿಕೆ ಸರ್ಕಾರ ನಿರ್ಧಾರ ಕೈಗೊಂಡಿದ್ದು, ಈಗಾಗಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ ಅವರೊಂದಿಗೆ ಚರ್ಚೆ ನಡೆಸಿ ಐದು ಲಕ್ಷ ಮನೆಗಳ ನಿರ್ಮಾಣಕ್ಕೆ ಮುಂದಾಗಿದ್ದೇವೆ ಎಂದರು.
ಇನ್ನೂ, ಪ್ರಮುಖವಾಗಿ ಪಂಚಾಯತಿ ವಾರು ಮನೆಗಳ ಅವಶ್ಯಕತೆ ಕುರಿತು ಸಮೀಕ್ಷೆ ನಡೆಸಲಾಗುತ್ತಿದೆ. ಈ ಸಮೀಕ್ಷಾ ವರದಿ ಜನವರಿ ಅಂತ್ಯದ ವೇಳೆಗೆ ಕೈಸೇರಲಿದ್ದು, ಆನಂತರ ಮನೆ ನಿರ್ಮಾಣಕ್ಕೆ ಹಣ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದರು.
ಮುಂದಿನ ವಾರ್ಷಿಕ ಸಾಲಿನ ಡಿಸೆಂಬರ್ ವೇಳೆಗೆ 5 ಲಕ್ಷ ಮನೆಗಳನ್ನು ಪೂರ್ಣಗೊಳಿಸಲಾಗುವುದು. ಜೊತೆಗೆ, ಬುಡಕಟ್ಟು ಸಮುದಾಯದವರಿಗೂ ಸೂರು ದೊರಕಿಸಲಾಗುವುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.