ಪಂಚವಟಿ ಕಾಲೋನಿ ಸ್ಲಂ ಮತ್ತು ಎಸ್. ಬಂಗಾರಪ್ಪ

Prasthutha|

ಶಿವಮೊಗ್ಗ ನಗರದ ನಡುಮನೆಯಲ್ಲಿದ್ದ ಹೆಸರಾಂತ ‘ ಪಂಚವಟಿ ಕಾಲೋನಿ ಸ್ಲಂ’ ತೆರವಿಗೆ ನ್ಯಾಯಾಲಯ ಆದೇಶ ಹೊರಡಿಸಿತ್ತು. ಎಪ್ಪತ್ತು ವರ್ಷಗಳ ಕಾಲ ಈ ನೆಲ ಉಳಿಸಿಕೊಳ್ಳಲು ನಡೆಸಿದ ಈ ಸ್ಲಂ ಜನರ ಹೋರಾಟ ರಾಜಕೀಯ,ಸಾಮಾಜಿಕ ಮತ್ತು ಆರ್ಥಿಕ ಬಲವಿಲ್ಲದೆ ನೆಲಕಚ್ಚಿತ್ತು. ಅದೆಷ್ಟೋ ಬಾರಿ ತೆರವಿಗೆ ನ್ಯಾಯಾಲಯದ ಆದೇಶವಾಗಿದ್ದರೂ ಛಲಬಿಡದೆ ನಡೆದ ಹೋರಾಟಗಳಿಂದ ಉಳಿಸಿಕೊಂಡು ಬರಲಾಗಿತ್ತು. ಅಂತಿಮವಾಗಿ ಕೊನೆಗೂ ಅದನ್ನು ತೆರವು ಗೊಳಿಸಲೆ ಬೇಕಾದ ಸ್ಥಿತಿ ಎದುರಾಗಿತ್ತು. ( ಪಂಚವಟಿ ಕಾಲೋನಿ ಸ್ಲಂ ಹೋರಾಟ ಒಂದು ರೋಚಕ ಕಥನ ಕೃತಿ ರೂಪದಲ್ಲಿ ಬರಲಿದೆ)

- Advertisement -


2000 ನೇ ಇಸವಿ ನ್ಯಾಯಾಲಯದ ಆದೇಶದಂತೆ ಅದೊಂದು ದಿನ ಈ ಸ್ಲಂ ನ್ನು ತೆರವುಗೊಳಿಸಲು ಜಾಗದ ವಾರಸುದಾರನೆನಿಸಿಕೊಂಡ ಜಿಲ್ಲೆಯ ಪ್ರಸಿದ್ದ ಬಸ್ ಟ್ರಾನ್ಸ್ ಪೋರ್ಟ್ ನ ಕುಟುಂಬ ಪೊಲೀಸ್ ರ ‘ಸಕಲ ವ್ಯವಸ್ಥೆ’ಯನ್ನು ಮಾಡಿಕೊಂಡಿತ್ತು. ಇದನ್ನು ತಡೆಯಲು ಸ್ಲಂ ನಿವಾಸಿಗಳು ನಡೆಸಿದ ಎಲ್ಲಾ ಕಾನೂನು.ರಾಜಕೀಯ ಪಯತ್ನಗಳು ವಿಫಲವಾದವು. ಅಂದಿನ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದ ಇಬ್ಬರೂ ಅತ್ಯಂತ ಮಾನವೀಯ ಕಳಕಳಿ ಉಳ್ಳವರಾಗಿದ್ದು ( ಈ ಇಬ್ಬರ ಬಗ್ಗೆ ಇನ್ನೊಮ್ಮೆ ಬರೆಯುತ್ತೇನೆ) ಬಡಜನರ ಪರ ಅಂತಃಕರಣ ಹೊಂದಿದ್ದರೂ ನ್ಯಾಯಾಲಯದ ಕಟ್ಟಪ್ಪಣೆ ಮುಂದೆ ಅಸಹಾಯಕರಾಗಿದ್ದರು. ಯಾವುದೇ ಕಾರಣಕ್ಕೂ ಜಾಗ ಖಾಲಿ ಮಾಡುವುದಿಲ್ಲ ಎಂದು ಪಟ್ಟು ಹಿಡಿದಿದ್ದ ಈ ಹೋರಾಟದ ಮುಂಚೂಣಿಯಲ್ಲಿದ್ದ ನನ್ನನ್ನು ನಿವಾಸಿಗಳ ಯಾವ ಪ್ರತಿರೋಧವಿಲ್ಲದೆ ತೆರವುಗೊಳಿಸಲು ಸಹಕರಿಸಬೇಕೆಂದು ಮನವೊಲಿಸುವ ಪ್ರಯತ್ನ ಪೊಲೀಸರಿಂದ ನಡೆದಿತ್ತು.


ಮತ್ತೊಂದು ಕಡೆ ಡಿಸಿ.ಎಸ್ಪಿ ಸೋ ಕಾಲ್ಡ್ ಭೂಮಾಲೀಕನಿಗೆ ಪರ್ಯಾಯ ಭೂಮಿ ಕೊಡುವ ಭರವಸೆಯೊಂದಿಗೆ ಸ್ಲಂ ನಿವಾಸಿಗಳನ್ನು ಉಳಿಸುವ ಕಸರತ್ತು ನಡೆಸುತ್ತಿದ್ದರು. ಆದರೆ ನಗರದ ಮಧ್ಯಭಾಗದಲ್ಲಿ ದುಬಾರಿ ಮೌಲ್ಯದ ಭೂಮಿಯನ್ನು ಬಿಟ್ಟುಕೊಡಲು ಆತ ಸಿದ್ಧನಿರಲಿಲ್ಲ. ಅದಕ್ಕಿಂತಲೂ ಅಮಾನವೀಯವಾದದ್ದು ಎಂದರೆ ಸ್ಲಂ ನ ಸುತ್ತಮುತ್ತ ಇದ್ದ ಉತ್ತಮ(?)ರಿಗೆ ಈ ಸ್ಲಂ ನ ಜನ ತಮ್ಮ ಕಣ್ಣಮುಂದೆ ಇರುವುದು ಬೇಕಾಗಿರಲಿಲ್ಲ.
ಕೃಷ್ಣ ಸರ್ಕಾರದಲ್ಲಿದ್ದ ಜಿಲ್ಲಾ ಉಸ್ತುವಾರಿ ಸಚಿವರನ್ನು ಮಧ್ಯಪ್ರವೇಶಿಸಿ ಸ್ಲಂ ಜನರ ರಕ್ಷಣೆಗೆ ಬರಬೇಕೆಂದು ಬೇಡಿಕೊಳ್ಳಲಾಯಿತು. ಆದರೆ ಸಚಿವರು ಕಂಟೆಂಪ್ಟ್ ಆಫ್ ಕೋರ್ಟ್ ನ ಭೀತಿಯಿಂದ ನೆರವಿಗೆ ಬರಲು ನಿರಾಕರಿಸಿದರು.

- Advertisement -

ಎಲ್ಲಾ ಪ್ರಯತ್ನಗಳು ವಿಫಲವಾಗಿದ್ದವು.
ಮಾರನೆ ದಿನ ಸ್ಲಂ ನೆಲಸಮವಾಗಿ ನಾವೆಲ್ಲರೂ ಬೀದಿಪಾಲಾಗುವುದು ಖಚಿತವಾಗಿತ್ತು. ನಮ್ಮ ಪಾಲಿಗೆ ಅದೊಂದು ಸಾವು – ಬದುಕಿನ ಹೋರಾಟವೇ ಅಗಿತ್ತು. ಎಷ್ಟೇ ಪೊಲೀಸರು ಬಂದರೂ ಜಾಗ ಬಿಟ್ಟುಕೊಡದಂತೆ ಪ್ರತಿರೋಧಿಸಲು ಸಿದ್ದರಾಗಿದ್ದೆವು. ಪರಿಸ್ಥಿತಿ ಬಿಗಾಡಯಿಸಿದರೆ ಆತ್ಮಾಹುತಿ ಮೂಲಕವಾದರೂ ಜಾಗ ಉಳಿಸಿಕೊಳ್ಳಲು ತೀರ್ಮಾನಿಸಿದ್ದೆವು
ಬೆಳಗಿನ ಜಾವ ನಾಲ್ಕು ಗಂಟೆಗೆ ಸಬ್ ಇನ್ಸ್ ಪೆಕ್ಟರ್ ನನ್ನ ಮನೆ ಬಾಗಿಲು ತಟ್ಟಿದರು.’ ರವಿಯರೆ… ಎಸ್ಪಿ ಸಾಹೇಬ್ರು ಕರೀತಿದಾರೆ ಬರಬೇಕು ‘ ಎಂದು ಜೀಪು ಹತ್ತಿಸಿಕೊಂಡರು. ಎಸ್ಪಿ ನನಗೆ ಆಪ್ತರೂ ಆಗಿದ್ದರೂ.ಅವರ ಮೇಲಿನ ಭರವಸೆಯಿಂದ ಯಾವ ಅಳುಕು ಇಲ್ಲದೆ ಜೀಪು ಹತ್ತಿದೆ. ಜೀಪು ಸೀದಾ ಡಿಸಿ ಮನೆಗೆ ತಲುಪಿತು.ಅಲ್ಲಿ ಡಿ.ಸಿ – ಎಸ್ಪಿ ಇಬ್ಬರೂ ಇದ್ದರು.
‘ರವಿ….ನಿಮ್ಮನ್ನು ಉಳಿಸಲು ಕೊನೆಯ ಅವಕಾಶವೊಂದಿದೆ. ಈಗ ಬಂಗಾಪ್ನೋರು ರೈಲಲ್ಲಿ ಬರ್ತಾ ಇದಾರೆ( ಶಿವಮೊಗ್ಗ). ಅವರ ಮೂಲಕ ಭೂಮಾಲೀಕನಿಗೆ ಮಾತಾಡಿಸಿ ತೆರವು ಕಾರ್ಯಾಚರಣೆಯನ್ನು ಕೆಲವು ದಿನಗಳ ಕಾಲ ಮೂಂದೂಡಿಸಿದರೆ ಅಷ್ಟರೊಳಗೆ ಸ್ಲಂ ಬೋರ್ಡ್ ನಿಂದ ಈ ಜಾಗ ಉಳಿಸುವ ಕೆಲಸ ಮಾಡ್ತಿನಿ. ಅದಕ್ಕೆ ಸಮಯಬೇಕು’ ಎಂದು ಡಿಸಿ ಕೊನೆಯ ಸಾಧ್ಯತೆಯನ್ನು ನನ್ನ ಪಾಲಿಗೆ ಹಾಕಿದರು.


ಸ್ಲಂ ತೆರವಿಗೆ ಆದೇಶ ತಂದಿದ್ದವರು ಪ್ರಸಿದ್ದ ಬಸ್ ಸಾರಿಗೆ ಕಂಪನಿಯ ಮಾಲೀಕ. ಆತ ಬಂಗಾರಪ್ಪನವರಿಗೂ ಪರಿಚಯ. ಒಂದು ಹಂತದಲ್ಲಿ ಆಪ್ತ ಕೂಡ. ಈ ಕಾರಣದಿಂದ ಬಂಗಾರಪ್ಪ ಅವರ ಮಾತಿಗೆ ಭೂ ಮಾಲೀಕ ಒಪ್ಪುತ್ತಾನೆ ಅನ್ನೂ ಲಾಜಿಕ್ ಡಿಸಿ ಮತ್ತು ಎಸ್ಪಿಯವರದ್ದು. ಮುಳುಗುತ್ತಿದ್ದ ನಮಗೆ ಒಂದು ಗರಿಕೆ ಹುಲ್ಲು ಸಿಕ್ಕಂತಾಯ್ತು. ಡಿಸಿ ಬಂಗ್ಲೆಯಿಂದ ಸರ್ಕ್ಯೂಟ್ ಹೌಸ್ ಗೆ ಬಂದೆ. ಬೆಳಗಿನ ಜಾವ 5 ಗಂಟೆ. ಸಂಸದರಾಗಿದ್ದ ಬಂಗಾರಪ್ಪನವರು ಆಗಷ್ಟೆ ರೈಲಿಳಿದು ಸರ್ಕ್ಯೂಟ್ ಹೌಸ್ ನ ಕೊಠಡಿಗೆ ಕಾಲಿಡುತ್ತಿದ್ದರು. ಜನಜಂಗುಳಿ. ಕೊಠಡಿಯ ಹಾಲ್ ನಲ್ಲಿದ್ದ ನಾನು ಬಂಗಾರಪ್ಪ ಅವರ ಮುಂದೆ ನಿಂತು ಸ್ಲಂ ತೆರವಿನ ಆತಂಕವನ್ನು ವಿವರಿಸುವ ಮುಂಚೆಯೇ. ಬಸ್ ಕಂಪನಿ ಮಾಲೀಕನನ್ನು ತಕ್ಷಣವೆ ಕರೆ ತರುವಂತೆ ಬಂಗಾರಪ್ಪನವರು ಆದೇಶ ಹೊರಡಿಸಿದರು.
ಹಿರಿಯ ಪತ್ರಕರ್ತರೂ ,ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರೂ ಆಗಿದ್ದ ಎಂ. ನಾಗೇಂದ್ರ ರಾವ್ ಅವರು ‘ ಸರ್ ಈ ಸಮಸ್ಯೆಗೆ ನೀವ್ಯಾಕೆ ನಾನೇ ಸಾಲೋ ಮಾಡ್ತಿನಿ. ತಾವು ಸೊರಬಕ್ಕೆ ಹೊರಡಿ’ ಎಂದರು.

‘ಮಿಸ್ಟರ್ ನಾಗೇಂದ್ರರಾವ್ ಇದೆಲ್ಲಾ ನಿಮ್ ಕೈಲಿ ಆಗೋಲ್ಲ. ಅವ್ರನ್ನ ಕರ್ಕೊಂಡ್ ಬನ್ನಿ ..’ ಎಂದು ತಾಕೀತು ಮಾಡಿದರು.
ಪ್ರಾಧಿಕಾರದ ಕಾರಿನಲ್ಲೆ ಹೊರಟ ನಾನು ಭೂಮಾಲೀಕ ನ ಮನೆ ಬಾಗಿಲಲ್ಲಿ ನಿಂತು ಸಾಹೇಬ್ರ ಕರೆಯನ್ನು ತಿಳಿಸುವ ಮೊದಲೆ ಮಡಿಪಂಚೆ, ಗಂಧ ತೀಡಿಕೊಂಡು ಪೂಜೆಯಲ್ಲಿದ್ದ ಭೂ ಮಾಲೀಕ ದಡಬಡನೆ ಅಂಗಿ ಪ್ಯಾಂಟು ಏರಿಸಿಕೊಂಡು ಕಾರಿನಲ್ಲಿ ಕುಳಿತು ಬಂದ. ಬನ್ನಿ ಬನ್ನಿ ಎಂದು ಸ್ವಾಗತಿಸಿದ ಬಂಗಾರಪ್ಪ ಅವರು ಆತನೊಂದಿಗೆ ನನ್ನನ್ನು.ಎಸ್ಪಿ.ಡಿಸಿಯನ್ನು ಬೆಡ್ ರೂಂ ಗೆ ಕರೆದು ಬಾಗಿಲು ಹಾಕಿಸಿದರು. ಅಷ್ಟರೊಳಗೆ ಎಲ್ಲಾ ವಿಷಯವನ್ನು ಡಿಸಿ ಬಂಗಾರಪ್ಪನವರಿಗೆ ವಿವರಿಸಿದ್ದರು.
ಬಾಗಿಲು ಮುಚ್ಚುತ್ತಿದ್ದಂತೆ ಬಂಗಾರಪ್ಪ ಭೂ ಮಾಲೀಕನ ವಿರುದ್ಧ ಅಬ್ಬರಿಸಿ ಬಿಟ್ಟರು.’ ಹೇ ಮಿಸ್ಟರ್….ನೀನೇನು ಪಾಳೆಗಾರ ಅಂದ್ಕೊಂಡಿದಿಯಾ , ಬಡವರನ್ನು ಬೀದಿಗೆ ತಳ್ಳಿ ಗೂಟ ಹೊಡ್ಕಂಡ್ ಬದ್ಕಿರ್ತಿಯಾ? , ನಿನ್ನ ಎಲ್ಲಾ ಟ್ರಾನ್ಸ್ ಪೋರ್ಟ್ ದಂಧೆನೆ ಬಂದ್ ಮಾಡ್ಬಿಡ್ತಿನಿ.’ ಎಂದು ಗುಡುಗಿ ಬಿಟ್ಟರು.


ಬಂಗಾರಪ್ಪ ಅವರ ಈ ಅನಿರೀಕ್ಷಿತ ದಾಳಿಯಿಂದ ಬಸ್ ಕಂಪನಿ ಮಾಲೀಕ ಕಂಗಾಲಾಗಿಬಿಟ್ಟ. ಬಂಗಾರಪ್ಪ ಅವರ ಮಾತು ಮುಗಿದಿರಲಿಲ್ಲ. ಆತ.’ ಸರ್ ಇದ್ರಲ್ಲಿ ನಂದೇನಿಲ್ಲ. ನನ್ನ ತಮ್ಮ ಕೋರ್ಟ್ ಆದೇಶ ತಂದಿದಾನೆ….’ ಎಂದು ಸಮಜಾಯಿಸಿ ಕೊಡಲು ಮುಂದಾದ. ‘ ಹೇ ಅದೆಲ್ಲಾ ನಂಗೊತ್ತಿಲ್ಲ. ಬಡವರ ಬದುಕಿಗೆ ಕೈ ಹಾಕಿದ್ರೆ ತಿಕ ಕೂಯ್ದುಬಿಡ್ತಿನಿ, ಏನು ತಿಳ್ಕೊಂಡಿದಿರಿ. ನಾನು ಬದುಕಿರೋವರೆಗೂ ಬಡವರ ಕಣ್ಣೀರು ನೆಲಕ್ಕೆ ಬೀಳೋಕೆ ಬಿಡೋಲ್ಲ. ಕೋರ್ಟಂತೆ ಕೋರ್ಟ್ ,ಇಲ್ಲಿ ನಾನೇ ಸುಪ್ರೀಂ ಕೋರ್ಟ್. ಹುಷಾರ್’! .’


ಬಂಗಾರಪ್ಪ ಬೆಳಗಿನಜಾವದ ಗುಡುಗು,ಸಿಡಿಲಿನ ಅಕಾಲಿಕ ಮಳೆಯಂತೆ ಅಬ್ಬರಿಸಿಬಿಟ್ಟರು. ಈ ಅನಿರೀಕ್ಷಿತ ಧಾಳಿಗೆ ಭೂ ಮಾಲೀಕ ನ ಮೈ -ಕೈ ಮೇಲಿದ್ದ ನಾಮ.ಗಂಧವೆಲ್ಲ ನೆಂದು ನೀರಾಗಿ ಇಳಿಯತೊಡಗಿತ್ತು.
ಬಂಗಾರಪ್ಪನವರ ಸಿಟ್ಟು(?) ಡಿ.ಸಿ- ಎಸ್ಪಿ ಕಡೆಗೆ ತಿರುಗಿತು.
‘ ಏನ್ರಿ ಬಡವರ ಮನೆ ಒಡೆಯೋಕಾ ನಿಮ್ಮನ್ನು ಜಿಲ್ಲೆಯಲ್ಲಿಟ್ಕೊಂಡಿರೋದು?’ ಎಂದು ಕ್ಲಾಸ್ ತಗೊಂಡ್ರು.
ನಾನು ಬೆವತು ಸಣ್ಣಗೆ ನಡುಗಿದ್ದೆ. ಕೊಠಡಿಯಲ್ಲಿ ಯಾರ ಸದ್ದೂ ಇಲ್ಲದೆ ಜೋರು ಮಳೆ ಬಂದು ಬಿಟ್ಟಂಗಾಗಿತ್ತು.

ಮರುಕ್ಷಣದಲ್ಲಿ ಒಂದು ಹೆಜ್ಜೆ ಮುಂದೆ ಬಂದ ಬಂಗಾರಪ್ಪನವರು ನಡುಗಿ ಪತರಗುಟ್ಟುತ್ತಿದ್ದ ಸೋ ಕಾಲ್ಡ್ ಭೂ ಮಾಲೀಕನ ಹೆಗಲ ಮೇಲೆ ಕೈ ಹಾಕಿ ಕರೆತಂದು ಮಂಚದ ಮೇಲೆ ಪಕ್ಕದಲ್ಲಿ ಕೂರಿಸಿಕೊಂಡರು.
‘ ನೋಡಿ… ( ಅವರ ಹೆಸರಿಡಿದು) ಈ ಸಮಾಜದಲ್ಲಿ ಎಲ್ರಿಗೂ ಬದುಕೋ ಹಕ್ಕಿದೆ. ಹಾಗಂತ ಬಡವರ ಬದ್ಕೋ ಹಕ್ಕನ್ನು ಕೀತ್ಕೊಬಾರ್ದು. ಎಲ್ಲದಕ್ಕೂ ಒಂದು ದಾರಿ ಇರುತ್ತೆ. ಆ ಸ್ಲಂ ನ ಬಿಟ್ಟುಬಿಡಿ ನಿಮಗೆ ಬೇರೆ ಜಾಗ ಕೊಡಿಸ್ತಿನಿ. ಕೋರ್ಟುಗೀಟು ಎಲ್ಲಾ ಬಿಟ್ಟಾಕಿ, ಡಿಸಿ ಜೊತೆ ಕುತ್ಕೊಂಡ್ ಮಾತಾಡಿ ಬಗೆಹರಿಸ್ಕಳಿ….’ ಎಂದು ಸಿಟ್ಟು ಇಳಿದ ತಾಯಿಯೊಬ್ಬಳು ಮಗನಿಗೆ ತೋರಿಸುವ ಮಮಕಾರದಂತೆ ಬಂಗಾರಪ್ಪ ಮಾತಾಡುತ್ತಿದ್ದರು.


ಭೂ ಮಾಲೀಕ ಸಹಜ ಸ್ಥಿತಿಗೆ ಬಂದಿದ್ದ.
‘ರವಿಕುಮಾರ್ ಇವ್ರು ಜೊತೆ ಮಾತಾಡಿ ಎಲ್ಲಾ ಬಗೆಹರ್ಸ್ಕೊಳಿ’ ಎಂದು ನನಗೂ ಸೂಚಿಸಿದ ಬಂಗಾರಪ್ಪನವರು ಸ್ಲಂ ಗೆ ಕಾಲಿಡದಂತೆ ಡಿಸಿ- ಎಸ್ಪಿಗೂ ಫೈನಲ್ ವಾರ್ನ್ ಮಾಡಿಬಿಟ್ಟರು. ಅಷ್ಟರೊಳಗೆ ಕೊಠಡಿಯೊಳಗೆ ಟೀ ಬಂತು. ತಾವೆ ತಮ್ಮ ಕೈಯಾರ ತಮ್ಮ ಭೂಮಾಲೀಕನಿಗೆ ಟೀ ಕೊಟ್ಟು ಇಷ್ಟೊತ್ತು ಏನೂ ನಡೆದೆ ಇಲ್ಲವೇನೋ ಎಂಬಂತೆ ಕುಶಲೋಪರಿ ಮಾತಾಡಿದರು. ಆತನನ್ನು ಮನೆಗೆ ಬಿಟ್ಟು ಬರುವಂತೆ ತಮ್ಮ ಕಾರನ್ನೆ ಕಳುಹಿಸಿದರು. ನನ್ನ ಕಡೆ ನೋಡಿ ಮೂಗಿನ ಮೇಲೆ ಜಾರಿದ ಕನ್ನಡದೊಳಗಿಂದ ಕಣ್ಣು ಮಿಟುಕಿಸಿ ಸಣ್ಣಗೆ ನಕ್ಕರು.


ಭಯ,ಆತಂಕ,ಸಿಟ್ಟು ನಿಂದ ಕುದಿಯುತ್ತಿದ್ದ ಪಂಚವಟಿ ಕಾಲೋನಿಯ ಸ್ಲಂ ನಿರಾಳಗೊಂಡು ನಿಟ್ಟುಸಿರು ಬಿಟ್ಟಿತ್ತು. ನ್ಯಾಯಾಲಯದ ಆದೇಶ ಕೈಯಲ್ಲಿದ್ದರೂ ಭೂ ಮಾಲೀಕ ಹತ್ತು ವರ್ಷಗಳ ಕಾಲ ಸ್ಲಂ ಕಡೆ ತಲೆ ಹಾಕಲಿಲ್ಲ.
ಸರ್ಕಾರಗಳು ಬದಲಾದವು, 2009 ರ ಲೋಕ ಸಭಾ ಚುನಾವಣೆ ಬಂಗಾರಪ್ಪ ಸೋತುಬಿಟ್ಟರು. ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ವಿಜೃಂಭಿಸುತ್ತಿದ್ದರು. ಭೂ ಮಾಲೀಕನ ಕೈ ಬಲವಾಯಿತು.
2000 ನೆ ಇಸವಿಯಲ್ಲಿ ಬಂಗಾರಪ್ಪ ಅವರ ಒಂದೇ ಒಂದು ಗುಡುಗಿನಿಂದ ಉಳಿದಿದ್ದ ಪಂಚವಟಿ ಕಾಲೋನಿ ಸ್ಲಂ 2009 ರಲ್ಲಿ ನೆಲಸಮಗೊಂಡಿತು.
ಮಿಸ್ ಯು ಬಂಗಾರಪ್ಪಾಜಿ…
Wish u Happy birthday sir



Join Whatsapp