“ಪಂಚಮಸಾಲಿ” ಜಾತಿಯನ್ನು ಹಿಂದುಳಿದ ವರ್ಗಗಳ 2ಎ ಪಟ್ಟಿಗೆ ಸೇರಿಸಬಾರದು: ಹಾಲುಮತ ಮಹಾಸಭಾ ಒತ್ತಾಯ

Prasthutha|

ಬೆಂಗಳೂರು: ಕುರುಬ ಜಾತಿಗಳನ್ನು ಎಸ್.ಟಿ. ಮೀಸಲಾತಿ ಪಟ್ಟಿಯೊಳಗೆ ವಿಸ್ತಾರ ಮಾಡದ ಹೊರತು ಹಿಂದುಳಿದ ವರ್ಗಗಳ ಪಟ್ಟಿಯೊಳಗೆ “ಪಂಚಮಸಾಲಿ ಸಮುದಾಯದ ಜೊತೆ ಇತರೆ ಮುಂದುವರೆದ ಜಾತಿಗಳನ್ನು ಸೇರಿಸಬಾರದು ಎಂದು ಹಾಲುಮತ ಮಹಾಸಭಾ ರಾಜ್ಯ ಹಿಂದುಳಿದ ವರ್ಗಗಳ ಆಯೋಗಕ್ಕೆ ಮನವಿ ಸಲ್ಲಿಸಿದೆ.

- Advertisement -

ಮಹಾಸಭಾದ ಅಧ್ಯಕ್ಷ ರುದ್ರಣ್ಣ ಗುಳಗುಳಿ ನೇತೃತ್ವದ ನಿಯೋಗ ಆಯೋಗದ ಅಧ್ಯಕ್ಷ ಕೆ. ಜಯಪ್ರಕಾಶ್ ಹೆಗ್ಡೆ ಅವರಿಗೆ ಮನವಿ ಸಲ್ಲಿಸಿತು.

ರಾಜ್ಯದಲ್ಲಿ ಹಿಂದುಳಿದ ವರ್ಗ (2ಎ) ಪ್ರವರ್ಗಗಳಿಗೆ ಶೇಕಡಾ 15ರಷ್ಟು ಮೀಸಲಾತಿಯಿದೆ. ಪಟ್ಟಿಯಲ್ಲಿ ನೂರಾರು ಜಾತಿಗಳಿವೆ. ಈಗಾಗಲೇ ಮುಂದುವರೆದ ಜಾತಿಗಳನ್ನು ಸಹ 2ಎಗೆ ಸೇರಿಸಿ, ಹಿಂದುಳಿದ ವರ್ಗಗಳ ಅವಕಾಶಗಳನ್ನು ಕಸಿಯಲಾಗುತ್ತಿದೆ. ರಾಜ್ಯದಲ್ಲಿ ತಮ್ಮನ್ನು ತಾವು ಅತಿದೊಡ್ಡ ಸಮುದಾಯವೆಂದು ಹೇಳಿಕೊಳ್ಳುತ್ತಿರುವ “ಪಂಚಮಸಾಲಿ” ಜಾತಿಯನ್ನು ಹಿಂದುಳಿದ ವರ್ಗಗಳ 2ಎ ಪಟ್ಟಿಗೆ ಸೇರಿಸಲು ಒತ್ತಾಯಿಸಲಾಗುತ್ತಿದೆ. ಸರ್ಕಾರವೂ ಸಹ ಯೋಚಿಸದೇ ಅಧ್ಯಯನಕ್ಕೆ ಆದೇಶ ನೀಡಿದೆ. ಇದರಿಂದ ಹಿಂದುಳಿದ ವರ್ಗಗಳ ಸಮುದಾಯಗಳಿಗೆ ಶೈಕ್ಷಣಿಕವಾಗಿ, ಆರ್ಥಿಕವಾಗಿ, ರಾಜಕೀಯವಾಗಿಯೂ ಭಾರಿ ಅನ್ಯಾಯವಾಗುತ್ತದೆ ಎಂದು ಹೇಳಿದರು.

- Advertisement -

ರಾಜ್ಯದಲ್ಲಿ 1950ರಲ್ಲಿ ರಾಜ್ಯದ ಎಸ್. ಟಿ. ಮೀಸಲಾತಿ ಪಟ್ಟಿಯಲ್ಲಿ ಕುರುಬ ಜಾತಿಯಿದೆ. ಈಗಿನ ಎಸ್.ಟಿ.ಪಟ್ಟಿಯಲ್ಲಿರುವ 50 ಜಾತಿಗಳಲ್ಲಿ 7 ಜಾತಿಗಳು ಕುರುಬ ಜಾತಿಗೆ ಸಂಬಂಧಿಸಿವೆ. ಕುರುಬ ಸಮುದಾಯಕ್ಕೆ ಆಗಿರುವ ಅನ್ಯಾಯ ಸರಿಪಡಿಸಿ, ರಾಜ್ಯದ 31 ಜಿಲ್ಲೆಗಳಿಗೂ ಕುರುಬರಿಗೆ ಎಸ್.ಟಿ. ಮೀಸಲಾತಿ ವಿಸ್ತರಿಸಿ ನ್ಯಾಯ ಒದಗಿಸಬೇಕು. 2018 ರಲ್ಲಿ ರಾಜ್ಯ ಸರ್ಕಾರ ಕುಲಶಾಸ್ತ್ರೀಯ ಅಧ್ಯಯನಕ್ಕೆ ಆದೇಶ ನೀಡಿದೆ. ಅದರಂತೆ ಅಧ್ಯಯನವು ಸಹ ನಡೆಯುತ್ತಿದೆ ಎಂದು ರುದ್ರಣ್ಣ ಗುಳಗುಳಿ ಹೇಳಿದ್ದಾರೆ.

ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಪಂಚಮಸಾಲಿ ಸೇರಿದಂತೆ ಹಲವು ಮುಂದುವರೆದ ಜಾತಿಗಳನ್ನು ಸೇರಿಸಿದರೆ ಕುರುಬರಿಗೆ ಅನ್ಯಾಯವಾಗುತ್ತದೆ. ಈ ನಿಟ್ಟಿನಲ್ಲಿ ಕುರುಬರನ್ನು ಎಸ್. ಟಿ. ಮೀಸಲಾತಿ ಪಟ್ಟಿಯೊಳಗೆ ವಿಸ್ತರಿಸದ ಹೊರತು ಬೇರೆ ಜಾತಿಗಳನ್ನು ಹಿಂದುಳಿದ ವರ್ಗಗಳಿಗೆ ಸೇರಿಸಬಾರದು ಎಂದರು.

Join Whatsapp