ಬೆಂಗಳೂರು: ಬೆಂಗಳೂರಿನ ಚಾಮರಾಜಪೇಟೆಯ ಪಂಪ ಮಹಾಕವಿ ರಸ್ತೆಯ ಹೆಸರನ್ನು ಬದಲಿಸಬೇಕೆಂಬ ಪ್ರಸ್ತಾಪವನ್ನು ಕನ್ನಡ ಸಾಹಿತ್ಯ ಪರಿಷತ್ ಬಿಬಿಎಂಪಿಗೆ ಸಲ್ಲಿಸಿರುವುದು ಆಘಾತಕಾರಿ ವಿದ್ಯಮಾನವಾಗಿದ್ದು ಕರ್ನಾಟಕ ರಕ್ಷಣಾ ವೇದಿಕೆ ಈ ಪ್ರಸ್ತಾಪವನ್ನು ತೀವ್ರವಾಗಿ ಖಂಡಿಸುತ್ತದೆ ಎಂದು ಕರವೇ ಅಧ್ಯಕ್ಷ ಡಾ.ಎ.ನಾರಾಯಣಗೌಡ ತಿಳಿಸಿದ್ದಾರೆ.
ಕನ್ನಡದ ಆದಿಕವಿ ಪಂಪನ ರಸ್ತೆಯ ಹೆಸರನ್ನು ಕನ್ನಡಿಗರ ಪ್ರಾತಿನಿಧಿಕ ಸಂಘಟನೆ ಎಂದು ಹೇಳಿಕೊಳ್ಳುವ ಕನ್ನಡ ಸಾಹಿತ್ಯ ಪರಿಷತ್ತೇ ಬದಲಿಸಲು ಹೊರಟಿರುವುದು ವಿಲಕ್ಷಣವಾದ ಘಟನೆಯಾಗಿದ್ದು, ಪರಿಷತ್ತು ತನ್ನ ಮಾನವನ್ನು ತಾನೇ ಹರಾಜು ಹಾಕಿಕೊಂಡಂತಾಗಿದೆ ಎಂದು ಸರಣಿ ಟ್ವೀಟ್ ಮೂಲಕ ಟೀಕಿಸಿದ್ದಾರೆ.
ಹತ್ತನೇ ಶತಮಾನದಲ್ಲಿ ಬದುಕಿದ ಪಂಪ ಮಹಾಕವಿ ಇಡೀ ಕನ್ನಡ ಸಾಹಿತ್ಯ ಚರಿತ್ರೆಗೆ ಮುನ್ನುಡಿಯನ್ನು ಬರೆದವರು. ಭೂಮಿ, ಸೂರ್ಯ, ಚಂದ್ರರು ಇರುವವರೆಗೆ ಅವರ ಹೆಸರು ಅಮರವಾಗಿರುತ್ತದೆ. ಸಾಹಿತ್ಯ ಪರಿಷತ್ತು ಇಂಥ ದುಸ್ಸಾಹಸಕ್ಕೆ ಇಳಿದಿದ್ದು ಯಾಕೆ ಎಂಬುದೇ ಅರ್ಥವಾಗುತ್ತಿಲ್ಲ. ಪಂಪ ಮಹಾಕವಿ ರಸ್ತೆಯ ಒಂದು ಭಾಗಕ್ಕೆ ಮಾತ್ರ ಕನ್ನಡ ಸಾಹಿತ್ಯ ಪರಿಷತ್ ರಸ್ತೆ ಎಂದು ಹೆಸರಿಡುವ ಪ್ರಸ್ತಾವನೆ ಸಲ್ಲಿಸಿರುವುದಾಗಿ ಅಧ್ಯಕ್ಷರಾದ ಮಹೇಶ್ ಜೋಷಿ ಹೇಳಿರುವುದನ್ನು ಗಮನಿಸಿದೆ. ಪಂಪನ ಹೆಸರಿನ ರಸ್ತೆಯ ಒಂದು ಮೀಟರ್ ರಸ್ತೆಯ ಹೆಸರನ್ನೂ ಬದಲಿಸುವ ಅವಶ್ಯಕತೆ ಇಲ್ಲ ಎಂಬುದು ಕರವೇ ನಿಲುವಾಗಿರುತ್ತದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಒಂದು ವೇಳೆ ಪರಿಷತ್ತು ರಸ್ತೆಯ ಹೆಸರನ್ನು ಬದಲಿಸಲು ಹಟ ಹಿಡಿದಲ್ಲಿ, ಕರ್ನಾಟಕ ರಕ್ಷಣಾ ವೇದಿಕೆ ತೀವ್ರವಾಗಿ ಪ್ರತಿಭಟಿಸಬೇಕಾಗುತ್ತದೆ. ಕಸಾಪ ವಿರುದ್ಧವೇ ಹೋರಾಟ ನಡೆಸಲು ನಾವು ಹಿಂಜರಿಯುವುದಿಲ್ಲ ಎಂಬ ಎಚ್ಚರಿಕೆಯನ್ನು ನೀಡಲು ಬಯಸುತ್ತೇನೆ ಎಂದು ಅವರು ಟ್ವೀಟ್ ನಲ್ಲಿ ತಿಳಿಸಿದ್ದಾರೆ.