ಇಸ್ರೇಲ್: ಇಸ್ರೇಲ್‌ನಲ್ಲಿ ಬಂಧನದಲ್ಲಿರುವ ಪ್ಯಾಲೆಸ್ತೀನ್ ಕೈದಿಗಳಲ್ಲಿ ಹೆಚ್ಚಿನವರನ್ನು ಯಾವುದೇ ವಿಚಾರಣೆ ನಡೆಸದೆ ಜೈಲಿನಲ್ಲಿರಿಸಲಾಗಿದೆ. ಎಲ್ಲಾ ಪ್ಯಾಲೆಸ್ತೀನ್ ಕೈದಿಗಳ ಮೇಲೆ ನಿರಂತರ ನಿಂದನೆ ಮತ್ತು ಚಿತ್ರಹಿಂಸೆ ಮಾಡಲಾಗಿದೆ. ಎಂದು ಇಸ್ರೇಲ್‍ನ ಮಾನವ ಹಕ್ಕುಗಳ ಗುಂಪು ಬಿ’ಟ್ಸೆಲಮ್ ವರದಿ ಮಾಡಿದೆ. ಅಕ್ಟೋಬರ್ 7ರ ಗಾಝಾ ದಾಳಿಯ ಬಳಿಕ ಇಸ್ರೇಲ್ ಜೈಲಿನಲ್ಲಿ ಬಂಧನದಲ್ಲಿದ್ದ 55 ಪ್ಯಾಲೆಸ್ತೀನ್ ಕೈದಿಗಳ ಸಂದರ್ಶನವನ್ನು ಆಧರಿಸಿ ಈ ವರದಿ ತಯಾರಿಸಲಾಗಿದೆ.
ನೆಗೆವ್ ಮರುಭೂಮಿಯ ಮಿಲಿಟರಿ ನೆಲೆಯಲ್ಲಿ ಇಸ್ರೇಲ್ ಯೋಧರು 9 ಕೈದಿಗಳಿಗೆ ತೀವ್ರ ಚಿತ್ರಹಿಂಸೆ ನೀಡಿದ ಆರೋಪ ಕೇಳಿ ಬಂದ ಕೆಲ ದಿನಗಳ ಬಳಿಕ ವರದಿ ಬಿಡುಗಡೆಯಾಗಿದೆ.
ಪ್ಯಾಲೆಸ್ತೀನ್ ಕೈದಿಗಳ ಮೇಲೆ ತೀವ್ರವಾಗಿ ಥಳಿಸುತ್ತಾ ಅವಮಾನಕರವಾಗಿ ನಡೆಸಿಕೊಳ್ಳಲಾಗುತ್ತಿದೆ. ನಿದ್ರಾಹೀನತೆ, ನಿರಂತರ ಲೈಂಗಿಕ ಹಿಂಸೆಗೂ ಒಳಪಡಿಸಲಾಗುತ್ತಿದೆ. ಸರಕಾರದ ಆದೇಶಗಳಡಿಯೇ ಇದು ನಡೆಯುತ್ತದೆ. ದೇಶೀಯ ಮತ್ತು ಅಂತಾರಾಷ್ಟ್ರೀಯ ಕಾನೂನಿನಡಿಯ ಕಟ್ಟುಪಾಡುಗಳ ಉಲ್ಲಂಘನೆ ನಿರಂತರವಾಗಿದೆ. ಇಸ್ರೇಲ್‍ನ ರಾಷ್ಟ್ರೀಯ ಭದ್ರತಾ ಸಚಿವ ಇತಮರ್ ಬೆನ್-ಗ್ವಿವರ್ ಅವರ ನಿರ್ದೇಶನದಡಿ ಕೈದಿಗಳ ವಿರುದ್ಧ ಕ್ರಮ ಕೈಗೊಂಡಿರುವ ಬಗ್ಗೆ ಪುರಾವೆಗಳಿವೆ ಎಂದು ವರದಿ ಹೇಳಿದೆ.
ಆದರೆ ಇಸ್ರೇಲ್ ಬಂದೀಖಾನೆ ಇಲಾಖೆ ವರದಿಯನ್ನು ತಳ್ಳಿಹಾಕಿದ್ದು ಎಲ್ಲಾ ಕೈದಿಗಳನ್ನೂ ಕಾನೂನಿನ ಪ್ರಕಾರ, ವೃತ್ತಿಪರ ತರಬೇತಿ ಪಡೆದ ಸಿಬ್ಬಂದಿಯಿಂದ ಎಲ್ಲಾ ಮೂಲಭೂತ ಹಕ್ಕುಗಳನ್ನು ಒದಗಿಸಿ ನೋಡಿಕೊಳ್ಳಲಾಗುತ್ತಿದೆ ಎಂದಿದೆ.