ಪಾಲಕ್ಕಾಡ್: ಅವಳಿ ಹತ್ಯೆಗೆ ಕಾರಣವಾದ ಪಾಲಕ್ಕಾಡ್ ಜಿಲ್ಲೆಯಾದ್ಯಂತ ನಿಷೇಧಾಜ್ಞೆ ವಿಧಿಸಿ ಜಿಲ್ಲಾಡಳಿತವು ಆದೇಶಿಸಿದೆ.
ಇಂದಿನಿಂದ ಎಪ್ರಿಲ್ 20ರ ಸಾಯಂಕಾಲ 6 ಗಂಟೆವರೆಗೆ ನಿಷೇಧಾಜ್ಞೆಯನ್ನು ವಿಧಿಸಿ ಜಿಲ್ಲಾಧಿಕಾರಿ ಮೃಣ್ಮಯಿ ಜೋಶಿ ಆದೇಶವಿತ್ತಿದ್ದಾರೆ.
ನಿಷೇಧಾಜ್ಞೆ ಅವಧಿಯಲ್ಲಿ ಐದು ಹಾಗೂ ಅದಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಗುಂಪು ಸೇರುವುದು, ಮೆರವಣಿಗೆ ಹಾಗೂ ಧ್ವನಿ ವರ್ಧಕಗಳನ್ನು ಬಳಸುವಿಕೆ ಮುಂತಾದ ಚಟುವಟಿಕೆಗಳಿಗೆ ನಿಷೇಧ ಹೇರಲಾಗಿದೆ.
ಜೊತೆಗೆ, ಸಾರ್ವಜನಿಕರು ಯಾವುದೇ ಮಾರಕಾಸ್ತ್ರಗಳನ್ನು ಕೊಂಡೊಯ್ಯದಂತೆ ಹಾಗೂ ಸುಳ್ಳು ಸಂದೇಶಗಳನ್ನು ಹರಡದಂತೆ ಪಾಲಕ್ಕಾಡ್ ಜಿಲ್ಲಾಡಳಿತವು ಎಚ್ಚರಿಕೆ ನೀಡಿದೆ.
ನಿನ್ನೆ ಶುಕ್ರವಾರ ಮಸೀದಿಯಿಂದ ಹಿಂತಿರುಗುತ್ತಿದ್ದ ವೇಳೆ ಪಾಲ್ಕಾಡ್ ನ ಸ್ಥಳೀಯ ಎಸ್ಡಿಪಿಐ ನಾಯಕ ಝುಬೇರ್ ಅವರನ್ನು ಸಂಘ ಪರಿವಾರದ ಕಾರ್ಯಕರ್ತರು ಅವರ ತಂದೆಯ ಸಮ್ಮುಖದಲ್ಲೇ ಹತ್ಯೆಗೈದಿದ್ದರು. ಇದಾದ ಬಳಿಕ ಇಂದು ಮಧ್ಯಾಹ್ನ ಸರಿ ಸುಮಾರು ಅದೇ ಸಮಯಕ್ಕೆ ಸಂಘ ಪರಿವಾರದ ನಾಯಕ ಶ್ರೀನಿವಾಸನ್ ಹತ್ಯೆಗೈಯ್ಯಲಾಗಿದೆ.
ರಾಜಕೀಯ ಕಾರಣಕ್ಕಾಗಿ ನಡೆದ ಅವಳಿ ಹತ್ಯೆಯಿಂದ ಬೆಚ್ಚಿ ಬಿದ್ದಿರುವ ಪಾಲಕ್ಕಾಡ್ ನಲ್ಲಿ ಇದೀಗ ನಿಷೇಧಾಜ್ಞೆ ವಿಧಿಸಿ ಆದೇಶಿಸಲಾಗಿದೆ.