ಬೆಂಗಳೂರು: ವಿಧಾನಸೌಧದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗಲಾಗಿದೆ. ಆರೋಪಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ವಿಪಕ್ಷಗಳ ನಾಯಕರು ಆಡಳಿತಾರೂಢ ಕಾಂಗ್ರೆಸ್ ಸರ್ಕಾರದ ವಿರುದ್ಧ ಮುಗಿ ಬಿದ್ದಿದ್ದಾರೆ.
ಪಾಕಿಸ್ತಾನಕ್ಕೆ ಜೈಕಾರ ಹಾಕಿದ ದೇಶದ್ರೋಹಿಗಳನ್ನು ಬಂಧಿಸುವವರೆಗೂ ಬಿಜೆಪಿಯ ಹೋರಾಟ ಮುಂದುವರಿಯಲಿದೆ. ಇದು ಕಾಂಗ್ರೆಸ್ ಗೆ ನಾಚಿಕೆಗೇಡಿನ ವಿಚಾರವಾಗಿದ್ದು, ಇದರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಿರುವುದು ಖಂಡನೀಯ ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್.ಅಶೋಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಸಲಿಗೆ ವಿಧಾನಸೌಧದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗಲಾಗಿದ್ಯಾ ಎಂಬುದಕ್ಕೆ ಉತ್ತರವಾಗಿ ಎಎನ್‌ಐ ಸುದ್ದಿ ಸಂಸ್ಥೆಯ ಪತ್ರಕರ್ತ ಎಂ.ಮಧು ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನ ನಾಸೀರ್ ಹುಸೇನ್ ಅವರು ಗೆದ್ದ ಸಂದರ್ಭದಲ್ಲಿ ಬೆಂಬಲಿಗರ ಗುಂಪಿನಿಂದ ಕೂಗಿದ್ದು “ನಾಸೀರ್ ಸಾಬ್ ಜಿಂದಾಬಾದ್” ಎಂಬುದಾಗಿದೆ. “ಪಾಕಿಸ್ತಾನ್ ಜಿಂದಾಬಾದ್” ಅಲ್ಲ ಅಂತ ಎಎನ್‌ಐ ಸುದ್ಧಿ ಸಂಸ್ಥೆಯ ಪತ್ರಕರ್ತ ಎಂ.ಮಧು ಬರೆದುಕೊಂಡಿದ್ದಾರೆ.
ನಾನು ರಾಜ್ಯಸಭಾ ಚುನಾವಣೆ ಫಲಿತಾಂಶದ ನಂತ್ರ ಸುದ್ದಿಗಾಗಿ ಸ್ಥಳದಲ್ಲೇ ಇದ್ದೆನು. ಅಲ್ಲಿ ಕೂಗಿದ್ದು ನಾಸೀರ್ ಸಾಬ್ ಜಿಂದಾಬಾದ್ ಎಂದಾಗಿದೆ. ಅದರ ಹೊರತಾಗಿ ಪಾಕಿಸ್ತಾನ್ ಜಿಂದಾಬಾದ್ ಎಂಬುದಾಗಿ ಅಲ್ಲ. ಆದ್ರೇ ಇದನ್ನು ಮಾಧ್ಯಮಗಳು ತಿರುಚಿ ಸುದ್ದಿ ಮಾಡಿದ್ದಾವೆ. ಇದು ಉದ್ದೇಶ ಪೂರ್ವಕ ಪ್ರಚೋದನೆಯಾಗಿದೆ ಎಂದು ಪತ್ರಕರ್ತ ಎಂ. ಮಧು ವಿಷಾದ ವ್ಯಕ್ತಪಡಿಸಿದ್ದಾರೆ.