ಸಿದ್ದಾಪುರ: ಶನಿವಾರಸಂತೆಯಲ್ಲಿ ಮುಸ್ಲಿಂ ಮಹಿಳೆಯರು ನಡೆಸಿದ ಪತ್ರಿಭಟನೆಯಲ್ಲಿ ಅಂಬೇಡ್ಕರ್ ಜಿಂದಾಬಾದ್ ಘೋಷಣೆಯನ್ನು ಪಾಕಿಸ್ತಾನ್ ಜಿಂದಾಬಾದ್ ಎಂದು ತಿರುಚಿದ ಆರೋಪಿಗಳನ್ನು ಕೂಡಲೇ ಬಂಧಿಸಬೇಕೆಂದು ಸಿಪಿ(ಐ)ಎಂ ಪಕ್ಷ ಒತ್ತಾಯಿಸಿದೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪಕ್ಷದ ಜಿಲ್ಲಾ ಕಾರ್ಯದರ್ಶಿ ಹೆಚ್.ಬಿ ರಮೇಶ್, ಕೆಲವು ದಿನಗಳ ಹಿಂದೆ ಶನಿವಾರಸಂತೆಯಲ್ಲಿ ನಡೆದ ಘಟನೆಯಲ್ಲಿ ತಪ್ಪು ಮಾಡಿದವರನ್ನು ಹೊರಗೆ ಇಟ್ಟು ತಪ್ಪು ಮಾಡದವರನ್ನು ಜೈಲಿಗೆ ಅಟ್ಟಿದ್ದಾರೆಂದು ಆರೋಪಿಸಿದ ಅವರು, ಚುನಾವಣೆ ಸಮೀಪಿಸುತ್ತಿರುವ ಸಂದರ್ಭ ಜನರ ಮಧ್ಯೆ ಎತ್ತಿ ಕಟ್ಟಿ ಒಡೆದು ಆಳುವ ನೀತಿ ಅನುಸರಿಸಲು ಇಂತಹ ಘಟನೆಯನ್ನು ಬಳಸುವುದು ಪ್ರಜಾಪ್ರಭುತ್ವದಲ್ಲಿ ಸರಿಯಾದ ಬೆಳವಣಿಗೆ ಅಲ್ಲ. ತಪ್ಪು ಮಾಡಿದವರನ್ನು ಶಿಕ್ಷಿಸಬೇಕು ಅಲ್ಲದೇ ನೋವು ಅನುಭವಿಸಿದವರನ್ನು ಹೆದರಿಸುವುದು ಸರಿಯಲ್ಲ. ಪ್ರತಿಭಟನೆ ಮಾಡುವುದು ಪ್ರಜಾಪ್ರಭುತ್ವದಲ್ಲಿ ಜನಸಾಮಾನ್ಯರ ಹಕ್ಕು ಅದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದರು.
ವೀಡಿಯೋ ತಿರುಚಿ ಸಮಾಜದ ಸ್ವಾಸ್ಥ್ಯ ಕೆಡಿಸಲು ಹುನ್ನಾರ ನಡೆಸಿದವರ ವಿರುದ್ಧ ಲಘು ಸೆಕ್ಷನ್ ಪ್ರಕಾರ ಪ್ರಕರಣ ದಾಖಲಿಸಿರುವುದು ಖಂಡನೀಯ. ಆರೋಪಿಗಳ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಿ ಬಂಧಿಸಬೇಕೆಂದು ಪೊಲೀಸ್ ಇಲಾಖೆಯನ್ನು ಒತ್ತಾಯಿಸಿದ್ದಾರೆ.
ಸುಳ್ಳು ಹೆಚ್ಚು ಕಾಲ ಉಳಿಯುವುದಿಲ್ಲ ಎಂಬುದನ್ನು ಬಿಜೆಪಿಯವರು ಅರ್ಥ ಮಾಡಿಕೊಳ್ಳಬೇಕು. ದಲಿತರನ್ನು ಧಾಳವಾಗಿ ಬಳಸಿಕೊಳ್ಳುವುದು ಬೆಳವಣಿಗೆ ಅಲ್ಲ. ಶಾಂತಿ ಪ್ರಿಯ ಕೊಡಗು ಜಿಲ್ಲೆಯಲ್ಲಿ ಕೋಮು ವಿಷ ಬೀಜವನ್ನು ಭಿತ್ತಿ ಮನಸ್ಸುಗಳನ್ನು ಒಡೆಯುವ ಕೆಲಸ ಜಿಲ್ಲೆಯಲ್ಲಿ ನಡೆಯುವುದಿಲ್ಲ ಎಂಬುದನ್ನು ಬಿಜೆಪಿ ಅವರು ಮೊದಲು ಅರ್ಥ ಮಾಡಿಕೊಳ್ಳಬೇಕೆಂದ ರಮೇಶ್ ಜಿಲ್ಲೆಯಲ್ಲಿ ಶಾಂತಿ ಕದಡುವ ಕೆಲಸಕ್ಕೆ ಮುಂದಾಗುವವರ ಮೇಲೆ ಪೊಲೀಸರು ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ಜಿಲ್ಲಾ ಸಮಿತಿ ಸದಸ್ಯ ಎ.ಸಿ ಸಾಜು ಮತ್ತು ಎನ್.ಡಿ ಕುಟ್ಟಪ್ಪ ಇದ್ದರು.