ಟಿ20 ವಿಶ್ವಕಪ್ | 8ನೇ ಆವೃತ್ತಿಯಲ್ಲಿ ದಾಖಲೆಯ 6ನೇ ಬಾರಿಗೆ ಸೆಮಿಫೈನಲ್ ಆಡಲಿರುವ ಪಾಕಿಸ್ತಾನ

Prasthutha|

ಯಾವುದೇ ಒತ್ತಡವನ್ನು ಎದುರಿಸದೇ ಗ್ರೂಪ್ 1ರಿಂದ ಸೆಮಿಪೈನಲ್ ಪ್ರವೇಶಿಸಿದ ತಂಡ ನ್ಯೂಜಿಲೆಂಡ್. ಮತ್ತೊಂದೆಡೆ ಭರವಸೆ ಕೈ ಬಿಡದೆ ಹೋರಾಡಿ, ಕೊನೆಯಲ್ಲಿ ಅಧೃಷ್ಟವೂ ಕೈಹಿಡಿದ ಕಾರಣ ಅಚ್ಚರಿ ಎಂಬಂತೆ ಗ್ರೂಪ್ 2ರಿಂದ ಸೆಮಿಫೈನಲ್ ತಲುಪಿದ ಪಾಕಿಸ್ತಾನ. ಈ ಎರಡೂ ತಂಡಗಳು ನಾಳೆ (ನವೆಂಬರ್ 9, ಬುಧವಾರ) ನಡೆಯುವ ಟಿ 20 ವಿಶ್ವಕಪ್ನ ಮೊದಲ ಸೆಮಿಫೈನಲ್ನಲ್ಲಿ ಮುಖಾಮುಖಿಯಾಗುತ್ತಿವೆ.

- Advertisement -


ದಕ್ಷಿಣ ಆಫ್ರಿಕಾದಲ್ಲಿ ನಡೆದಿದ್ದ ಟಿ20 ವಿಶ್ವಕಪ್ನ ಉದ್ಘಾಟನಾ ಆವೃತ್ತಿಯ ಸೆಮಿಫೈನಲ್ ನಲ್ಲಿ ನ್ಯೂಜಿಲೆಂಡ್-ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಪಾಕ್ 6 ವಿಕೆಟ್ ಅಂತರದಲ್ಲಿ ಜಯಭೇರಿ ಬಾರಿಸಿತ್ತು.
8ನೇ ಆವೃತ್ತಿಯ ಟಿ20 ವಿಶ್ವಕಪ್ ನಲ್ಲಿ ಪಾಕಿಸ್ತಾನ 6ನೇ ಬಾರಿಗೆ ಸೆಮಿಫೈನಲ್ ಪ್ರವೇಶಿಸಿದೆ. ಇದುವರೆಗೂ ಎರಡು ಬಾರಿ ಫೈನಲ್ ಪ್ರವೇಶಿಸಿರುವ ಪಾಕ್, ಟೂರ್ನಿಯ ಚೊಚ್ಚಲ ಆವೃತ್ತಿಯಲ್ಲಿ (2007), ಭಾರತಕ್ಕೆ 5 ರನ್ ಗಳ ಅಂತರದಲ್ಲಿ ರೋಚಕವಾಗಿ ಶರಣಾಗಿತ್ತು. ಆದರೆ ಇಂಗ್ಲೆಂಡ್ ನಲ್ಲಿ ನಡೆದ ಮುಂದಿನ ಆವೃತ್ತಿಯಲ್ಲೂ (2009) ಫೈನಲ್ ಪ್ರವೇಶಿಸುವಲ್ಲಿ ಪಾಕ್ ಯಶಸ್ವಿಯಾಗಿತ್ತು. ಲಾರ್ಡ್ಸ್ನಲ್ಲಿ ನಡೆದ ಪ್ರಶಸ್ತಿ ಹಣಾಹಣಿಯಲ್ಲಿ ಪಾಕ್, ಶಾಹಿದ್ ಆಫ್ರೀದಿ (54 ರನ್) ಮತ್ತು ಅಬ್ದುಲ್ ರಝಾಕ್ (20 ರನ್ ನೀಡಿ 3 ವಿಕೆಟ್) ಪ್ರದರ್ಶನದ ಬಲದಲ್ಲಿ ಶ್ರೀಲಂಕಾ ತಂಡವನ್ನು ಮಣಿಸಿ ಚಾಂಪಿಯನ್ ಪಟ್ಟಕ್ಕೇರಿತ್ತು. ಆದರೆ ಆ ಬಳಿಕ 2010 ಮತ್ತು 2012ರಲ್ಲಿ ಪಾಕಿಸ್ತಾನದ ಅಭಿಯಾನ ಸೆಮಿಫೈನಲ್ ನಲ್ಲೇ ಅಂತ್ಯವಾಗಿತ್ತು.


ಮತ್ತೊಂದೆಡೆ 8ನೇ ಆವೃತ್ತಿಯ ಟಿ20 ವಿಶ್ವಕಪ್ ನಲ್ಲಿ ನ್ಯೂಜಿಲೆಂಡ್ 4ನೇ ಬಾರಿಗೆ ಸೆಮಿಫೈನಲ್ ಪ್ರವೇಶಿಸಿದೆ. ಟೂರ್ನಿಯ ಚೊಚ್ಚಲ ಆವೃತ್ತಿಯಲ್ಲಿ (2007) ಸೆಮಿಫೈನಲ್ ಪ್ರವೇಶಿಸಿದ್ದ ಕಿವೀಸ್, ಅದಾದ 9 ವರ್ಷಗಳ ಬಳಿಕ (2016) ಅಂತಿಮ ನಾಲ್ಕರ ಘಟ್ಟಕ್ಕೆ ಅರ್ಹತೆ ಪಡೆದಿತ್ತು. ಆದರೆ ಇಂಗ್ಲೆಂಡ್ ವಿರುದ್ಧ ಕೈಯಲ್ಲಿ 7 ವಿಕೆಟ್ ಅಂತರದಲ್ಲಿ ಸೋಲಿಗೆ ಶರಣಾಗಿತ್ತು. ಹೀಗೆ 2 ಬಾರಿ ಸೆಮಿ ಪ್ರವೇಶಿಸಿ 2 ಬಾರಿಯೂ ನಿರಾಸೆ ಅನುಭವಿಸಿದ್ದ ನ್ಯೂಜಿಲೆಂಡ್ ಕಳೆದ ವರ್ಷ (2021) ಯುಎಇನಲ್ಲಿ ನಡೆದಿದ್ದ ಟೂರ್ನಿಯಲ್ಲೂ ಸೆಮಿಫೈನಲ್ ಪ್ರವೇಶಿಸಿತ್ತು. ಇಲ್ಲಿ ಇಂಗ್ಲೆಂಡ್ ವಿರುದ್ಧ ಸೇಡು ತೀರಿಸಿಕೊಂಡು ಫೈನಲ್ ಫೈಟ್ಗೆ ಟಿಕೆಟ್ ಗಿಟ್ಟಿಸಿತ್ತಾದರೂ, ಆಸ್ಟ್ರೇಲಿಯಾ ವಿರುದ್ಧ 4 ವಿಕೆಟ್ ಅಂತರದಲ್ಲಿ ಮುಗ್ಗರಿಸಿತ್ತು. ಅಬುಧಾಬಿಯಲ್ಲಿ ಮೊದಲು ಬ್ಯಾಟ್ ಮಾಡಿದ್ದ ನ್ಯೂಜಿಲೆಂಡ್, ಕೇನ್ ವಿಲಿಯಮ್ಸನ್ (85 ರನ್) ಏಕಾಂಗಿ ಹೋರಾಟದ ನೆರವಿನಿಂದ 172 ರನ್ಗಳಿಸಿತ್ತು. ಆದರೆ ಈ ಮಿಚೆಲ್ ಮಾರ್ಶ್ (77*) ಮತ್ತು ಡೇವಿಡ್ ವಾರ್ನರ್ 53 ರನ್ಗಳಿಸುವ ಮೂಲಕ, ಇನ್ನೂ 7 ಎಸೆತಗಳು ಬಾಕಿ ಇರುವಂತೆಯೇ ಚಾಂಪಿಯನ್ ಪಟ್ಟದಲ್ಲಿ ವೀರಾಜಮಾನವಾಗಿತ್ತು.



Join Whatsapp