ರಾವಲ್ಪಿಂಡಿಯಲ್ಲಿ ಸೋಮವಾರ ಇಂಗ್ಲೆಂಡ್ ಹೊಸ ಚರಿತ್ರೆ ಬರೆದಿದೆ. ಪಾಕಿಸ್ತಾನದ ನೆಲದಲ್ಲಿ 18 ವರ್ಷಗಳ ಬಳಿಕ ಟೆಸ್ಟ್ ಪಂದ್ಯವನ್ನಾಡಿದ ಇಂಗ್ಲೆಂಡ್ ತಂಡ, ಆತಿಥೇಯರನ್ನು 74 ರನ್ಗಳ ಅಂತರದಲ್ಲಿ ಮಣಿಸುವ ಮೂಲಕ ದಾಖಲೆಯ ಗೆಲುವಿನ ಸಂಭ್ರವನ್ನಾಚರಿಸಿದೆ. ಪಾಕಿಸ್ತಾನದ ನೆಲದಲ್ಲಿ ಒಟ್ಟಾರೆಯಾಗಿ ಮೂರನೇ ಮತ್ತು ಕಳೆದ 22 ವರ್ಷಗಳಲ್ಲಿ ಇಂಗ್ಲೆಂಡ್ ತಂಡಕ್ಕೆ ಲಭಿಸಿದ ಮೊದಲ ಐತಿಹಾಸಿಕ ಗೆಲುವು ಇದಾಗಿದೆ. 1961ರಲ್ಲಿ ಇಂಗ್ಲೆಂಡ್ ಪಾಕಿಸ್ತಾನದಲ್ಲಿ ಚೊಚ್ಚಲ ಟೆಸ್ಟ್ ಗೆಲುವು ದಾಖಲಿಸಿತ್ತು. ಇದಾದ 39 ವರ್ಷಗಳ ಬಳಿಕ (2000) 2ನೇ ಗೆಲುವು ದಾಖಲಿಸಿತ್ತು.
3 ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯದ ಅಂತಿಮ ದಿನ ಪಾಕ್ ಗೆಲುವಿಗೆ 263 ರನ್ಗಳ ಅಗತ್ಯವಿತ್ತು. 2 ವಿಕೆಟ್ ನಷ್ಟದಲ್ಲಿ 80 ರನ್ಗಳಿಂದ ದಿನದಾಟ ಆರಂಭಿಸಿದ್ದ ಬಾಬರ್ ಅಝಂ ಪಡೆ, 268 ರನ್ಗಳಿಸುವಷ್ಟರಲ್ಲಿ ಆಲೌಟ್ ಆಯಿತು. ಒಂದು ಹಂತದಲ್ಲಿ 5 ವಿಕೆಟ್ ನಷ್ಟದಲ್ಲಿ 257 ರನ್ಗಳಿಸಿ ಗೆಲುವಿನತ್ತ ಮುನ್ನಡೆದಿದ್ದ ಆತಿಥೇಯ ತಂಡ, ಅಂತಿಮ ಓವರ್ಗಳಲ್ಲಿ ನಾಟಕೀಯ ಕುಸಿತ ಕಂಡಿತು. ಕೇವಲ 11 ರನ್ಗಳ ಅಂತರದಲ್ಲಿ ಐವರು ಪೆವಿಲಿಯನ್ ಸೇರಿಕೊಂಡಿದ್ದು ಪಾಕ್ ಪಾಲಿಗೆ ಮುಳುವಾಯಿತು. ಓಲಿ ರಾಬಿನ್ಸನ್ ಮತ್ತು ಜೇಮ್ಸ್ ಆಂಡರ್ಸನ್ ತಲಾ 4 ವಿಕೆಟ್ ಪಡೆಯುವ ಮೂಲಕ ಆಂಗ್ಲನ್ನರ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಮೊದಲ ಇನ್ನಿಂಗ್ಸ್ನಲ್ಲಿ ಪಾಕಿಸ್ತಾನದ 6 ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದ ವಿಲ್ ಜ್ಯಾಕ್ಸ್, 2ನೇ ಇನ್ನಿಂಗ್ಸ್ನಲ್ಲಿ 6 ಓವರ್ ಎಸೆದರೂ ವಿಕೆಟ್ ಪಡೆಯುವಲ್ಲಿ ವಿಫಲರಾದರು.
ಪ್ರಥಮ ಇನ್ನಿಂಗ್ಸ್ನ ಮೊದಲ ದಿನವೇ ವಿಶ್ವದಾಖಲೆ ನಿರ್ಮಿಸಿದ್ದ ಇಂಗ್ಲೆಂಡ್, 2ನೇ ದಿನ 657 ರನ್ಗಳಿಗೆ ಆಲೌಟ್ ಆಗಿತ್ತು. ದಿಟ್ಟ ಪ್ರತ್ಯುತ್ತರ ನೀಡಿದ್ದ ಪಾಕಿಸ್ತಾನ, 579 ರನ್ಗಳಿಸಿತ್ತು. 78 ರನ್ಗಳ ಮುನ್ನಡೆಯೊಂದಿಗೆ ದ್ವಿತೀಯ ಇನ್ನಿಂಗ್ಸ್ ಆರಂಭಿಸಿದ್ದ ಇಂಗ್ಲೆಂಡ್ 7 ವಿಕೆಟ್ ನಷ್ಟದಲ್ಲಿ 264 ರನ್ಗಳಿಸಿದ್ದ ವೇಳೆ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತ್ತು.
ಇಂಗ್ಲೆಂಡ್ ವಿರುದ್ಧ ತನ್ನ ನೆಲದಲ್ಲಿ ಪಾಕಿಸ್ತಾನ ಇದುವರೆಗೂ ಒಟ್ಟು 25 ಟೆಸ್ಟ್ ಪಂದ್ಯಗಳನ್ನಾಡಿದ್ದು, ಕೇವಲ 4 ಪಂದ್ಯಗಳನ್ನು ಗೆಲ್ಲುವಲ್ಲಿ ಮಾತ್ರ ಯಶಸ್ವಿಯಾಗಿದೆ. ಮೂರರಲ್ಲಿ ಇಂಗ್ಲೆಂಡ್ ಗೆದ್ದರೆ, ಉಳಿದ 18 ಟೆಸ್ಟ್ ಪಂದ್ಯಗಳು ಡ್ರಾದಲ್ಲಿ ಅಂತ್ಯಗೊಂಡಿದೆ.
3 ಪಂದ್ಯಗಳ ಟೆಸ್ಟ್ ಸರಣಿಯ ಎರಡನೇ ಪಂದ್ಯ, ಡಿಸೆಂಬರ್ 9, ಶುಕ್ರವಾರದಂದು ಮುಲ್ತಾನ್ನಲ್ಲಿ ಆರಂಭವಾಗಲಿದೆ.