ಪಾಕಿಸ್ತಾನ ಸಂಸತ್ತು ಮುಂದೂಡಿಕೆ: ವಿಶ್ವಾಸ ಮತಯಾಚನೆ ಮಾರ್ಚ್ 28ಕ್ಕೆ ನಿಗದಿ

Prasthutha|

ಇಸ್ಲಾಮಾಬಾದ್: ಪ್ರಧಾನಿ ಇಮ್ರಾನ್ ಖಾನ್ ಅವಿಶ್ವಾಸ ನಿರ್ಣಯದ ಯಾವುದೇ ಕಾಗದ ಪತ್ರಗಳನ್ನು ಮಂಡಿಸದೆಯೇ ಶುಕ್ರವಾರ ಪಾಕಿಸ್ತಾನದ ರಾಷ್ಟ್ರೀಯ ಅಸೆಂಬ್ಲಿಯು ಮುಂದೂಡಲ್ಪಟ್ಟಿತು. ಪಾಕಿಸ್ತಾನದ ಮಾಧ್ಯಮ ಸಂಸ್ಥೆ ಡಾವ್ನ್ ವರದಿಯಂತೆ ಸಂಸತ್ತು ಸೋಮವಾರಕ್ಕೆ ಮುಂದೂಲ್ಪಟ್ಟಿತು.

- Advertisement -

ದೇಶದಲ್ಲಿನ ಹಣದುಬ್ಬರಕ್ಕೆ ಮತ್ತು ಆರ್ಥಿಕ ಬಿಕ್ಕಟ್ಟಿಗೆ ಪ್ರಧಾನಿ ಇಮ್ರಾನ್ ಖಾನ್ ನೇತೃತ್ವದ ಪಿಟಿಐ- ಪಾಕಿಸ್ತಾನ್ ತೆಹ್ರಿಕ್ ಎ ಪಕ್ಷದ ದುರಾಡಳಿತವೇ ಕಾರಣ ಎಂದು ಪ್ರತಿಪಕ್ಷಗಳು ಮಾರ್ಚ್ 8ರಂದು ರಾಷ್ಟ್ರೀಯ ಅಸೆಂಬ್ಲಿ ಕಾರ್ಯಾಲಯದಲ್ಲಿ ಸರಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಪತ್ರ ನೀಡಿದಾಗಿನಿಂದ ಸರಕಾರ ಡೋಲಾಯಮಾನವಾಗಿದೆ.

ಇಸ್ಲಾಮಾಬಾದಿನಲ್ಲಿ ಸಂಸತ್ತು ಸೇರಿದಾಗ ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಪ್ರತಿಪಕ್ಷದ ನಾಯಕರಾದ ಶೆಹಬಾಜ್ ಶರೀಫ್, ಪಿಪಿಪಿ ಪಕ್ಷದ ಅಧ್ಯಕ್ಷ ಬಿಲಾವಲ್ ಭುಟ್ಟೋ, ಸಹ ಅಧ್ಯಕ್ಷ  ಆಸಿಫ್  ಆಲಿ ಜರ್ದಾರಿ ಮೊದಲಾದ ಅಗ್ರ ನಾಯಕರು ಹಾಜರಿದ್ದರು.

- Advertisement -

69ರ ಪ್ರಾಯದ ಇಮ್ರಾನ್ ಖಾನ್ ಸಮ್ಮಿಶ್ರ ಸರಕಾರ ನಡೆಸುತ್ತಿದ್ದು ಕೂಟದ ಯಾವುದಾದರೂ ಸಣ್ಣ ಪಕ್ಷ ಮೈತ್ರಿಯಿಂದ ಹೊರ ನಡೆದರೆ ಇಮ್ರಾನ್ ಹುದ್ದೆ ತೊರೆಯಬೇಕಾಗುತ್ತದೆ. ಮರಿ ಪಕ್ಷಗಳು ಇಮ್ರಾನ್ ರನ್ನು ಬೆಂಬಲಿಸುವುದಾಗಿ ಹೇಳಿದ್ದರೂ ಎರಡು ಡಜನ್ ನಷ್ಟು ಸದಸ್ಯರು ಇಮ್ರಾನ್ ವಿರುದ್ಧ ನಿಂತಿರುವುದಾಗಿ ಹೇಳಲಾಗಿದೆ.

ಪಾಕಿಸ್ತಾನದ ಯಾವ ಪ್ರಧಾನಿಯೂ ಇಲ್ಲಿಯವರೆಗೆ ಐದು ವರುಷಗಳ ಪೂರ್ಣಾವಧಿ ಅಧಿಕಾರ ನಡೆಸಿಲ್ಲ. ಪ್ರಧಾನಿ ಇಮ್ರಾನ್ ಖಾನ್ ಸರಕಾರ ಉಳಿಸಿಕೊಳ್ಳಲು ಓಡಾಡುತ್ತಿದ್ದಾರೆ. ಗುರುವಾರ ಒಳಾಡಳಿತ (ಗೃಹ) ಮಂತ್ರಿ ಶೇಖ್ ರಶೀದ್ ಅವರು ಸರಕಾರ ಅಲುಗಾಡುತ್ತಿದ್ದು ಬೇಗನೆ ದೇಶದಲ್ಲಿ ಚುನಾವಣೆ ನಡೆಯುವ ಅಪಾಯದ ಗಂಟೆ ಹೊಡೆಯುತ್ತಿದೆ ಎಂದು ಹೇಳಿದರು. ನಿಜವಾಗಿ 2023ರ ವರ್ಷಾಂತ್ಯದಲ್ಲಿ ಚುನಾವಣೆ ನಡೆಯಬೇಕಾಗಿದೆ.



Join Whatsapp