►ತೋಷಾ ಖಾನಾ ಪ್ರಕರಣದಲ್ಲಿ ಇಮ್ರಾನ್ ಖಾನ್ ಭ್ರಷ್ಟಾಚಾರ ಸಾಬೀತು
►ಮೂರು ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದ ಇಸ್ಲಾಮಾಬಾದ್ ನ್ಯಾಯಾಲಯ
ಇಸ್ಲಾಮಾಬಾದ್: ಪಾಕಿಸ್ತಾನದ ಮಾಜಿ ಪ್ರಧಾನಿ, ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ (ಪಿಟಿಐ) ಅಧ್ಯಕ್ಷ ಇಮ್ರಾನ್ ಖಾನ್ ಅವರಿಗೆ ಇಸ್ಲಾಮಾಬಾದ್’ನ ವಿಚಾರಣಾ ನ್ಯಾಯಾಲಯ ಮೂರು ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ.
ತೋಷಾ ಖಾನಾ ಪ್ರಕರಣದಲ್ಲಿ ಇಮ್ರಾನ್ ಖಾನ್ ವಿರುದ್ಧದ ಭ್ರಷ್ಟಾಚಾರ ಆರೋಪ ಸಾಬೀತಾಗಿದ್ದು, ಅವರು ದೋಷಿ ಎಂದು ತೀರ್ಪು ನೀಡಿರುವ ನ್ಯಾಯಲಯ ಇಮ್ರಾನ್ ಖಾನ್ ಅವರಿಗೆ ಮೂರು ವರ್ಷಗಳ ಕಾಲ ಜೈಲು ಶಿಕ್ಷೆ ಮತ್ತು 1 ಲಕ್ಷ ರೂಪಾಯಿ ದಂಡ ವಿಧಿಸಿ ಆದೇಶ ಮಾಡಿದೆ.
ತೋಷಾ ಖಾನಾ ಎಂಬುದು ಕ್ಯಾಬಿನೆಟ್ ವಿಭಾಗದ ಆಡಳಿತ ವ್ಯಾಪ್ತಿಯಲ್ಲಿರುವ ಒಂದು ಇಲಾಖೆಯಾಗಿದ್ದು ಅದು ಸಾರ್ವಜನಿಕ ಅಧಿಕಾರಿಗಳು ಸ್ವೀಕರಿಸಿದ ಉಡುಗೊರೆಗಳು ಮತ್ತು ಇತರ ಬೆಲೆಬಾಳುವ ವಸ್ತುಗಳನ್ನು ರಕ್ಷಿಸುತ್ತದೆ. ಇಮ್ರಾನ್ ಖಾನ್ ಅವರು ತಮ್ಮ ಅಧಿಕಾರಾವಧಿಯಲ್ಲಿ ಪಡೆದ ಅನೇಕ ಉಡುಗೊರೆಗಳ ವಿವರಗಳನ್ನು ಬಹಿರಂಗಪಡಿಸಲು ನಿರಾಕರಿಸಿದ್ದರು. ತೋಷಾ ಖಾನಾ ಎಂಬ ರಾಜ್ಯದ ಠೇವಣಿ ಸಂಸ್ಥೆಯಿಂದ ಕಡಿಮೆ ಬೆಲೆಗೆ ಪಡೆದ ದುಬಾರಿ ಬೆಲೆಯ ಗ್ರಾಫ್ ಕೈಗಡಿಯಾರ ಸೇರಿದಂತೆ ಉಡುಗೊರೆಗಳನ್ನು ಸ್ವಂತ ಲಾಭಕ್ಕಾಗಿ ಮಾರಾಟ ಮಾಡಿರುವ ಆರೋಪ ಮ್ರಾನ್ ಖಾನ್ ಅವರ ಮೇಲಿತ್ತು.
ನ್ಯಾಯಾಲಯ ತೀರ್ಪಿನಿಂದ ಇಮ್ರಾನ್ ಖಾನ್ ಅವರ ರಾಜಕೀಯ ಭವಿಷ್ಯದ ಮೇಲೆ ಕರಿನೆರಳು ಆವರಿಸಿದೆ. 3 ವರ್ಷಗಳ ಶಿಕ್ಷೆಯ ನಂತರ ಐದು ವರ್ಷಗಳವರೆಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಇಮ್ರಾನ್ ಖಾನ್ ಅವರಿಗೆ ಅವಕಾಶ ಇರುವುದಿಲ್ಲ. ಮುಂಬರುವ ಪಾಕಿಸ್ತಾನ ರಾಷ್ಟ್ರೀಯ ಚುನಾವಣೆಗಳಲ್ಲಿ ಇಮ್ರಾನ್ ಖಾನ್ ಅವರಿಗೆ ಭಾಗವಹಿಸುವ ಅವಕಾಶಗಳ ಇರುವುದಿಲ್ಲ ಎಂದು ಕಾನೂನು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.