ಭಾರತ – ಪಾಕಿಸ್ತಾನ ಹೈವೋಲ್ಟೇಜ್ ಪಂದ್ಯ : ಕೊಹ್ಲಿ ಪಡೆಗೆ ಹೀನಾಯ ಸೋಲು

Prasthutha|

ದುಬೈ : ತೀವ್ರ ಕುತೂಹಲ ಕೆರಳಿಸಿದ್ದ, ಅಭಿಮಾನಿಗಳಿಗೆ ಪ್ರತಿಷ್ಟೆಯಾಗಿದ್ದ ಮಹತ್ವದ ಪಂದ್ಯದಲ್ಲಿ ಟೀಮ್ ಇಂಡಿಯಾ ಪಾಕಿಸ್ತಾನದ ವಿರುದ್ಧ ಹೀನಾಯವಾಗಿ ಸೋಲು ಕಂಡಿದೆ.
ದುಬೈ ಅಂತಾರಾಷ್ಟ್ರೀಯ ಮೈದಾನದಲ್ಲಿ ನಡೆದ ಪ್ರತಿಷ್ಠೆಯ ಪಂದ್ಯದಲ್ಲಿ ಪಾಕಿಸ್ತಾನ 10 ವಿಕೆಟ್‌ಗಳ ಅಂತರದಲ್ಲಿ ಭರ್ಜರಿಯಾಗಿಯೇ ಗೆದ್ದು ಬೀಗಿದೆ.
ಟಾಸ್ ಸೋತು‌ ಬ್ಯಾಟಿಂಗ್’ಗೆ ಇಳಿಸಲ್ಪಟ್ಟಿದ್ದ ಭಾರತ ನಿಗಧಿತ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟದಲ್ಲಿ 151 ರನ್ ಕಲೆಹಾಕಿತ್ತು.
ಆದರೆ ಸವಾಲಿನ ಮೊತ್ತ ಬೆನ್ನಟ್ಟಿದ್ದ ಪಾಕಿಸ್ತಾನಕ್ಕೆ ಭಾರತದ ಬೌಲರ್‌ಗಳು ಪಂದ್ಯದ ಯಾವುದೇ ಹಂತದಲ್ಲೂ ಸವಾಲಾಗಲೇ ಇಲ್ಲ‌.
ಆರಂಭಿಕರಾಗಿ ಮೈದಾನಕ್ಕಿಳಿದ ಮೊಹಮ್ಮದ್ ರಿಝ್ವಾನ್ ಹಾಗೂ ಕ್ಯಾಪ್ಟನ್ ಬಾಬರ್ ಅಝಮ್ ಇಬ್ಬರೂ ಆಕರ್ಷಕ ಅರ್ಧಶತಕ ಸಿಡಿಸಿ ತಂಡವನ್ನು ಸುಲಭವಾಗಿ ಗೆಲುವಿನ ದಡ ಸೇರಿಸಿದರು.
2.1 ಓವರ್‌ಗಳು ಬಾಕಿ‌ ಇರುವಾಗಲೇ ಪಂದ್ಯ ಗೆದ್ದ ಪಾಕಿಸ್ತಾನ ,ಇದೇ ಮೊದಲ ಬಾರಿಗೆ ಐಸಿಸಿ ಟಿ-20 ಟೂರ್ನಿಯಲ್ಲಿ ಭಾರತದ ವಿರುದ್ದ ಗೆಲುವಿನ ನಗೆ ಬೀರಿದೆ

- Advertisement -

ಭಾರತ ಸವಾಲಿನ ಮೊತ್ತ

ಇನ್ನು ಇದಕ್ಕೂ ಮೊದಲು ಬ್ಯಾಟ್ ಮಾಡಿದ್ದ ಟೀಮ್ ಇಂಡಿಯಾ, ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟದಲ್ಲಿ 151 ರನ್’ಗಳಿಸಿತ್ತು. ಆರಂಭದಲ್ಲಿ ಎಡವಿದರೂ ಬಳಿಕ ಭಾರತದ ಬ್ಯಾಟರ್’ಗಳು ಚೇತರಿಕೆಯ ಪ್ರದರ್ಶನ ನೀಡಿದರು.

- Advertisement -

ನಾಯಕ ಬಾಬರ್ ಅಝಮ್ ನಿರ್ಧಾರವನ್ನು ಸಮರ್ಥಿಸುವ ರೀತಿಯಲ್ಲಿ ಪಾಕ್ ಬೌಲರ್‌ಗಳು ಆರಂಭದಲ್ಲೇ ಆರಂಭದಲ್ಲಿ ಬಿಗು ಬೌಲಿಂಗ್‌ ದಾಳಿ ಸಂಘಟಿಸಿದರು.
ತಾನು ಎದುರಿಸಿದ ಮೊದಲ ಎಸೆತದಲ್ಲೇ ವಿಕೆಟ್ ಒಪ್ಪಿಸಿದ ರೋಹಿತ್ ಶರ್ಮಾ ಶೂನ್ಯಕ್ಕೆ ಮರಳಿದರೆ, ಕೆ.ಎಲ್.ರಾಹುಲ್ ಮೂರು ರನ್’ಗಳಿಸಿ ಕ್ಲೀನ್ ಬೌಲ್ಡ್ ಆದರು.
ಇವರಿಬ್ಬರ ವಿಕೆಟ್ ಎಡಗೈ ವೇಗಿ ಶಾಹಿನ್ ಅಫ್ರೀದಿ ಪಾಲಾಯಿತು.
ಸೂರ್ಯಕುಮಾರ್ ಯಾದವ್ ಕೂಡ ಹೆಚ್ವು ಹೊತ್ತು ಕ್ರೀಸ್’ನಲ್ಲಿ ನಿಲ್ಲಲಿಲ್ಲ.
ಆದರೆ ಬಳಿಕ ಜೊತಯಾದ ವಿರಾಟ್ ಕೊಹ್ಲಿ ಹಾಗೂ ರಿಷಭ್ ಪಂತ್ ಎಚ್ಚರಿಕೆಯ ಜೊತೆಯಾಟವಾಡಿ ತಂಡದ ಮೊತ್ತವನ್ನು ನಿಧಾನವಾಗಿ ಹೆಚ್ಚಿಸಿದರು.
49 ಎಸೆತಗಳನ್ನು ಎದುರಿಸಿದ ಕ್ಯಾಪ್ಟನ್ ಕೊಹ್ಲಿ 1 ಸಿಕ್ಸರ್ ಹಾಗೂ 5 ಬೌಂಡರಿಗಳ ನೆರವಿನಿಂದ 57 ರನ್ ಗಳಿಸಿ ಶಾಹಿನ್ ಅಫ್ರೀದಿಗೆ ವಿಕೆಟ್ ಒಪ್ಪಿಸಿದರು. ರಿಷಭ್ ಪಂತ್ 39 ರನ್’ಗಳಿಸಿದರು.
ಪಾಕಿಸ್ತಾನದ ಪರ ಶಾಹಿನ್ ಅಫ್ರೀದಿ 3 ಹಾಗೂ ಹಸ್ಸನ್ ಅಲಿ 2 ವಿಕೆಟ್ ಪಡೆದು ಸೇರಿಸಿದರು.



Join Whatsapp