ಇಸ್ಲಾಮಾಬಾದ್: ಅಫ್ಘಾನಿಸ್ತಾನದ 1.45 ದಶಲಕ್ಷ ನಿರಾಶ್ರಿತರಿಗೆ ಪಾಕಿಸ್ತಾನದಲ್ಲಿ ಉಳಿದುಕೊಳ್ಳುವ ಹಕ್ಕನ್ನು ಒಂದು ವರ್ಷ ವಿಸ್ತರಿಸಲಾಗಿದೆ.
2021ರ ಆಗಸ್ಟ್ನಲ್ಲಿ ತಾಲಿಬಾನ್ ಸರಕಾರ ಅಧಿಕಾರ ವಶಪಡಿಸಿಕೊಂಡ ನಂತರ ಸುಮಾರು 6 ಲಕ್ಷ ಮಂದಿ ಅಫ್ಘಾನ್ನಿಂದ ಪಲಾಯನ ಮಾಡಿ ಪಾಕಿಸ್ತಾನದಲ್ಲಿ ಅಕ್ರಮವಾಗಿ ನೆಲೆಸಿರುವುದಾಗಿ ಅಂದಾಜಿಸಲಾಗಿದೆ.
ಭದ್ರತೆಯ ವಿಷಯದಲ್ಲಿ ತಾಲಿಬಾನ್ ಜತೆ ಬಿಕ್ಕಟ್ಟು ಮೂಡಿದ ಹಿನ್ನೆಲೆಯಲ್ಲಿ ಅಕ್ರಮ ವಲಸಿಗರು ತಕ್ಷಣ ದೇಶದಿಂದ ತೆರಳದಿದ್ದರೆ ಬಂಧಿಸುವುದಾಗಿ ಪಾಕಿಸ್ತಾನ ಸರಕಾರ ಕಳೆದ ವರ್ಷ ಆದೇಶಿಸಿತ್ತು. ಆದರೆ ದಾಖಲೆ ಪತ್ರ ಹೊಂದಿರುವ ವಲಸಿಗರು ಇನ್ನೂ ಒಂದು ವರ್ಷ ದೇಶದಲ್ಲಿ ಉಳಿಯಬಹುದು ಎಂದು ಸರಕಾರ ಹೇಳುವ ಮೂಲಕ ಔದಾರ್ಯ ತೋರಿಸಿದೆ.
ರಿಜಿಸ್ಟ್ರೇಷನ್ ಕಾರ್ಡ್ ಹೊಂದಿರುವ 1.45 ದಶಲಕ್ಷ ಅಫ್ಘಾನ್ ನಿರಾಶ್ರಿತರಿಗೆ 2025ರ ಜೂನ್ವರೆಗೆ ದೇಶದಲ್ಲಿ ಇರಲು ಅವಕಾಶ ಕಲ್ಪಿಸಲಾಗಿದೆ ಎಂದು ಪಾಕ್ ಪ್ರಧಾನಿ ಶಹಬಾಝ್ ಷರೀಫ್ ನೇತೃತ್ವದ ಸರಕಾರ ಹೇಳಿವೆ ಎಂದು ಮೂಲಗಳು ತಿಳಿಸಿವೆ.