ಪಡುಬಿದ್ರಿ: ಗೆಳೆಯರನ್ನು ರಕ್ಷಿಸಲು ಯತ್ನಿಸಿ ನೀರು ಪಾಲಾಗಿದ್ದ ಯುವಕನ ಮೃತದೇಹ 2 ದಿನಗಳ ಬಳಿಕ ಪತ್ತೆ

Prasthutha|

ಪಡುಬಿದ್ರಿ: ರವಿವಾರ ಬೆಳಿಗ್ಗೆ ಮರುವಾಯಿ ಹೆಕ್ಕಲು ಶಾಂಭವಿ ಹೊಳೆಗಿಳಿದ ಸಂದರ್ಭ ನೀರಿನಲ್ಲಿ ಮುಳುಗುತ್ತಿದ್ದ ಗೆಳೆಯರನ್ನು ರಕ್ಷಿಸಲು ತೆರಳಿ ನೀರು ಪಾಲಾಗಿದ್ದ ಅಭಿಲಾಷ್‌ (24) ಮೃತದೇಹ ಮಂಗಳವಾರ ಸಂಜೆ ಹೆಜಮಾಡಿಕೋಡಿಯ ಬೈತೋಟ ಬಳಿಯ ಸಮುದ್ರ ಕಿನಾರೆಯಲ್ಲಿ ಪತ್ತೆಯಾಗಿದೆ.

- Advertisement -

ಕರಾವಳಿ ಪೊಲೀಸ್‌ ಪಡೆಯ ಸಿಬಂದಿ ರಾಕೇಶ್‌ ಜತೆಗೆ ಚರಣ್‌ ಮತ್ತು ಗುರು ಎಂಬವರು ಗಸ್ತಿನಲ್ಲಿದ್ದ ಸಂದರ್ಭದಲ್ಲಿ ಸಮುದ್ರದ ಅಲೆಗಳ ಮಧ್ಯೆ ಮೃತದೇಹ ಕಂಡುಬಂದಿದೆ. ತಕ್ಷಣ ಅವರು ದಡಕ್ಕೆ ಎಳೆದು ತಂದಿದ್ದಾರೆ.

ರವಿವಾರ ಬೆಳಗ್ಗೆ 7.30ರ ವೇಳೆಗೆ 10 ಮಂದಿ ಗೆಳೆಯರು ಬಜಪೆಯಿಂದ ಅಗಮಿಸಿ ಮರುವಾಯಿ ಹೆಕ್ಕಲು ಶಾಂಭವಿ ಹೊಳೆಗೆ ಇಳಿದಿದ್ದರು. ಅಳಿವೆ ಬಾಗಿಲಿನಲ್ಲಿ ಇಬ್ಬರು ಗೆಳೆಯರು ಮುಳುಗುತ್ತಿದ್ದಾಗ ಅವರನ್ನು ರಕ್ಷಿಸಲು ಈಜು ತಿಳಿದ ಬಜಪೆ ಅದ್ಯಪಾಡಿಯ ಹಳೇ ವಿಮಾನ ನಿಲ್ದಾಣ ಬಳಿಯ ನಿವಾಸಿ ಅಭಿಲಾಷ್‌ ತೆರಳಿದ್ದರು. ಆದರೆ ಗೆಳೆಯರಿಬ್ಬರನ್ನು ಮೀನುಗಾರಿಕಾ ದೋಣಿಯೊಂದರ ಸಿಬಂದಿ ರಕ್ಷಿಸಿದ್ದು, ಅಭಿಲಾಷ್‌ ನೀರಿನಲ್ಲಿ ಕಾಣೆಯಾಗಿದ್ದರು.

- Advertisement -

ಘಟನೆ ನಡೆದ ಸ್ಥಳ ಅಳಿವೆ ಬಾಗಿಲಿನಲ್ಲಿ ಈಶ್ವರ್‌ ಮಲ್ಪೆ, ರಾಜ್ಯ ವಿಪತ್ತು ಸ್ಪಂದನ ಪಡೆ, ಕರಾವಳಿ ಕಾವಲು ಪಡೆ ಮತ್ತು ಸಾರ್ವಜನಿಕರು ಹುಡುಕಾಟ ನಡೆಸುತ್ತಿದ್ದರು.

ವಾಲಿಬಾಲ್‌ ಮತ್ತು ಕ್ರಿಕೆಟ್‌ನಲ್ಲಿ ಗಮನ ಸೆಳೆದಿದ್ದ ಅಭಿಲಾಷ್ ಅದ್ಯಪಾಡಿಯ ಕೂಲಿಕಾರ್ಮಿಕ ದಂಪತಿ ಎಂ.ಎಂ. ರಮೇಶ್‌ ಮತ್ತು ಶಾರದಾ ಅವರ ಮೂವರು ಮಕ್ಕಳಲ್ಲಿ ಒಬ್ಬನೇ ಪುತ್ರನಾಗಿದ್ದು, ಮನೆಯ ಆಧಾರ ಸ್ತಂಭವಾಗಿದ್ದರು. ಅಭಿಲಾಷ್‌ ಅಕ್ಕನ ವಿವಾಹ ನಿಶ್ಚಿತಾರ್ಥ ತಿಂಗಳ ಹಿಂದೆಯಷ್ಟೇ ನಡೆದಿತ್ತು. ತಂಗಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.



Join Whatsapp