ಮಂಗಳೂರು : ಶಾಂತವಾಗಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಶಾಂತಿ ಮೂಡಿಸಲು ಪ್ರಯತ್ನಿಸುತ್ತಿರುವ ಶಕ್ತಿಗಳ ವಿರುದ್ಧ ಕಠಿಣ ಕಾನೂನು ಕ್ರಮಕೈಗೊಳ್ಳುವಂತೆ ದ.ಕ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಪೂಜಾರಿ ಆಗ್ರಹಿಸಿದ್ದಾರೆ.
ಕಂಕನಾಡಿ ಮಸೀದಿ ಪಕ್ಕದ ರಸ್ತೆಯಲ್ಲಿ ನಮಾಝ್ ನಿರ್ವಹಿಸಿರುವ ಪ್ರಕರಣಕ್ಕೆ ಸಂಬಂಧಿಸಿ ಪ್ರಸ್ತುತ ನ್ಯೂಸ್ ಗೆ ಪ್ರತಿಕ್ರಿಯಿಸಿರುವ ಅವರು, ರಸ್ತೆಯಲ್ಲಿ ನಮಾಝ್ ಮಾಡುವ ವೀಡಿಯೋ ರೆಕಾರ್ಡ್ ಮಾಡಿ ಅದನ್ನು ವೈರಲ್ ಮಾಡಿರುವುದರ ಹಿಂದೆ ಮಂಗಳೂರಿನಲ್ಲಿ ಅಶಾಂತಿ ಸೃಷ್ಟಿಸುವ ಹುನ್ನಾರ ಇರಬಹುದು ಎಂದು ಅವರ ಸಂಶಯ ವ್ಯಕ್ತಪಡಿಸಿದ್ದಾರೆ. ವೀಡಿಯೋ ಮಾಡಿ ಅದನ್ನು ವೈರಲ್ ಮಾಡಿದವರ ಮೇಲೆ ಕಠಿಣ ಕಾನೂನು ಕ್ರಮಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಕೋಮುವಾದಿ ಶಕ್ತಿಗಳು ಸಮಾಜವನ್ನು ಒಡೆಯುವ ಪ್ರಯತ್ನ ಮಾಡುವಾಗ ಪೊಲೀಸರು ಸೂಕ್ಷ್ಮವಾಗಿ ನಡೆದುಕೊಳ್ಳಬೇಕಿತ್ತು, ಏಕಾಏಕಿ ಸುಮೊಟೊ ಕೇಸ್ ದಾಖಲಿಸಿರುವುದು ಸರಿಯಲ್ಲ ಎಂದು ಅವರು ಹೇಳಿದರು. ಪೊಲೀಸರು ಸುಮೊಟೊ ಕೇಸ್ ದಾಖಲಿಸಿರುವುದು ಅನಗತ್ಯ ಕ್ರಮ ಎಂದು ಅಭಿಪ್ರಾಯಪಟ್ಟಿರುವ ಅವರು, ಇದರಿಂದ ಪೊಲೀಸ್ ಇಲಾಖೆ ಮತ್ತು ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತೆ ಎಂದರು.
ಮಂಗಳೂರಲ್ಲಿ. ಒಮ್ಮೊಮ್ಮೆ ಧಾರ್ಮಿಕ ಕಾರ್ಯಗಳು ರಸ್ತೆಗೆ ಬರುವ ಸನ್ನಿವೇಶಗಳು ಸೃಷ್ಟಿಯಾಗುತ್ತದೆ, ಮಂಗಳೂರಲ್ಲಿ ಎಲ್ಲಾ ಧರ್ಮೀಯರ ಕಾರ್ಯಕ್ರಮಗಳಿಗೂ ರಸ್ತೆಯನ್ನು ಬಳಸಲಾಗುತ್ತದೆ. ಹೀಗಿರುವಾಗ ನಮಾಝ್ ವಿರುದ್ಧ ಸುಮೊಟೊ ಕೇಸ್ ದಾಖಲಿಸಿರುವುದು ಕೆಟ್ಟ ನಡೆ ಎಂದು ಅವರು ಹೇಳಿದರು.