ಮುಸ್ಲಿಮ್ ವಿರೋಧಿ ಹೇಳಿಕೆ ನೀಡಿದ್ದ ಪಿ.ಸಿ. ಜಾರ್ಜ್ ನಿರೀಕ್ಷಣಾ ಜಾಮೀನು ತಿರಸ್ಕಾರ: ಬಂಧನ ಸಾಧ್ಯತೆ

Prasthutha|

ಕೊಚ್ಚಿ: ಬಂಧನವನ್ನು ತಪ್ಪಿಸಲು ಪಿ ಸಿ ಜಾರ್ಜ್ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಎರ್ನಾಕುಲಂ ಸೆಷನ್ಸ್ ನ್ಯಾಯಾಲಯ ತಿರಸ್ಕರಿಸಿದೆ. ಪಿಸಿ ಜಾರ್ಜ್ ಅವರನ್ನು ಬಂಧಿಸಿ ವಿಚಾರಣೆ ನಡೆಸುವಂತೆ ನೀಡಿರುವ ಪೊಲೀಸರ ಮನವಿಯನ್ನು ನ್ಯಾಯಾಲಯ ಪುರಸ್ಕರಿಸಿದೆ.

- Advertisement -

ವೆನ್ನಲದಲ್ಲಿ ಜಾರ್ಜ್ ಮಾಡಿದ್ದ ದ್ವೇಷ ಭಾಷಣದ ವಿರುದ್ಧ ಪಾಲಾರಿವಟ್ಟಂ ಪೊಲೀಸರು ಕಳೆದ ವಾರ ಪ್ರಕರಣ ದಾಖಲಿಸಿದ್ದರು. ತಮ್ಮ ವಿರುದ್ಧದ ಪ್ರಕರಣವು ರಾಜಕೀಯ ಪ್ರೇರಿತವಾಗಿದೆ. ಧರ್ಮಗಳ ನಡುವಿನ ಕೆಲವು ಅನೈತಿಕತೆಯನ್ನು ಮಾತ್ರ ನಾನು ಬಹಿರಂಗಪಡಿಸಿದ್ದೇನೆ. ಪ್ರಾದೇಶಿಕವಾದ ರೀತಿಯಲ್ಲಿ ಕೆಲವು ವಿಷಯಗಳನ್ನು ಮಾತ್ರ ಹೇಳಿದ್ದೇನೆ ಎಂದು ಜಾರ್ಜ್ ನ್ಯಾಯಾಲಯಕ್ಕೆ ತಿಳಿಸಿದ್ದರು. ಆದರೆ ಬಂಧನವನ್ನು ತಪ್ಪಿಸಲು ಪಿಸಿ ಜಾರ್ಜ್ ಸಲ್ಲಿಸಿದ್ದ ಅರ್ಜಿಯನ್ನು  ತಿರಸ್ಕರಿಸಿದ ನ್ಯಾಯಾಲಯ,  ಜಾರ್ಜ್ ಕೆಲವು ದ್ವೇಷಪೂರಿತ ಹೇಳಿಕೆಗಳನ್ನು ನೀಡಿದ್ದಾರೆ ಎಂದು ತೀರ್ಪು ನೀಡಿದೆ.

ಪಿ ಸಿ ಜಾರ್ಜ್ ಭಾಷಣದ ವಿಡಿಯೋವನ್ನು ಪರಿಶೀಲಿಸಿದ ನ್ಯಾಯಾಲಯ ಜಾಮೀನು ನಿರಾಕರಿಸಿದೆ. ಈ ಹಿಂದೆ ತಿರುವನಂತಪುರಂನಲ್ಲಿ ದ್ವೇಷದ ಭಾಷಣದಲ್ಲಿ ಜಾರ್ಜ್‌ಗೆ ಜಾಮೀನು ನೀಡಿದಾಗ ನ್ಯಾಯಾಲಯವು ಅವರಿಗೆ ಕಠಿಣ ಸೂಚನೆಗಳನ್ನು ನೀಡಿತ್ತು. ದ್ವೇಷದ ಮಾತುಗಳನ್ನು ಪುನರಾವರ್ತಿಸಬಾರದು ಎಂಬ ಆದೇಶವನ್ನು ಪಿಸಿ ಜಾರ್ಜ್ ಉಲ್ಲಂಘಿಸಿದ್ದಾರೆ ಎಂದು ಎರ್ನಾಕುಲಂ ಸೆಷನ್ಸ್ ಕೋರ್ಟ್ ಕೂಡ ಅಭಿಪ್ರಾಯಪಟ್ಟಿದೆ.

- Advertisement -

ತಿರುವನಂತಪುರಂನಲ್ಲಿ ನಡೆದ ಹಿಂದೂ ಮಹಾ ಸಮ್ಮೇಳನದಲ್ಲಿ, ದೇಶದ ಮೇಲೆ ಹಿಡಿತ ಸಾಧಿಸುವ ಉದ್ದೇಶದಿಂದ ಮುಸ್ಲಿಮರು ನಡೆಸುತ್ತಿರುವ ರೆಸ್ಟೋರೆಂಟ್‌ ಗಳಲ್ಲಿ ಪುರುಷತ್ವವನ್ನು ಕಡಿಮೆ ಮಾಡುವ ಹನಿಗಳನ್ನು ಬೆರೆಸಿದ ಚಹಾವನ್ನು ಮಾರಾಟ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದರು. 33 ವರ್ಷಗಳ ಕಾಲ ರಾಜ್ಯ ವಿಧಾನಸಭೆಯಲ್ಲಿ ಪೂಂಜಾರ್ ಕ್ಷೇತ್ರವನ್ನು ಪ್ರತಿನಿಧಿಸಿದ್ದ ಜಾರ್ಜ್ ಅವರು ಮುಸ್ಲಿಮರು ನಡೆಸುತ್ತಿರುವ ವ್ಯವಹಾರಗಳನ್ನು ಬಹಿಷ್ಕರಿಸುವಂತೆ ಮುಸ್ಲಿಮೇತರರನ್ನು ಒತ್ತಾಯಿಸಿದ್ದರು.

ಈ ಹೇಳಿಕೆ ಹಿನ್ನೆಲೆಯಲ್ಲಿ ಜಾರ್ಜ್ ಅವರ ಬಂಧನಕ್ಕೆ ಪೊಲೀಸರು ಮುಂದಾಗುವ ನಿರೀಕ್ಷೆಯಿದೆ. ಇದಕ್ಕೂ ಮೊದಲು ಅವರು ಹೈಕೋರ್ಟ್ ಮೊರೆ ಹೋಗಲು ನಿರ್ಧರಿಸಿದ್ದಾರೆ.



Join Whatsapp