ಪ. ಬಂಗಾಳ| ರಾಷ್ಟ್ರಗೀತೆಗೆ ಅವಮಾನಿಸಿದ 12 ಬಿಜೆಪಿ ಶಾಸಕರ ವಿರುದ್ಧ ಎಫ್‌ಐಆರ್

Prasthutha|

ಕೋಲ್ಕತ್ತಾ: ವಿಧಾನಸಭೆ ಆವರಣದಲ್ಲಿ ರಾಷ್ಟ್ರಗೀತೆಗೆ ಅವಮಾನ ಮಾಡಿದ 12 ಬಿಜೆಪಿ ಶಾಸಕರ ವಿರುದ್ಧ ಕೋಲ್ಕತ್ತಾ ಪೊಲೀಸರು ಹರೆ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿದ್ದಾರೆ. ಇದರಲ್ಲಿ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ಮತ್ತು ಸದನದಲ್ಲಿ ಬಿಜೆಪಿ ಪಕ್ಷದ ಮುಖ್ಯ ಸಚೇತಕ ಮನೋಜ್ ತಿಗ್ಗಾ ಸೇರಿದ್ದಾರೆ.

- Advertisement -

ಕೇಂದ್ರ ಪ್ರಾಯೋಜಿತ ವಿವಿಧ ಯೋಜನೆಗಳಡಿ ರಾಜ್ಯ ಸರ್ಕಾರಕ್ಕೆ ಬರಬೇಕಿದ್ದ ಬಾಕಿ ಹಣ ಪಾವತಿಯಾಗದೇ ಇರುವುದನ್ನು ವಿರೋಧಿಸಿದ ಆಡಳಿತರೂಢ ಟಿಎಂಸಿ ಶಾಸಕರು ಸಿಎಂ ಮಮತಾ ಬ್ಯಾನರ್ಜಿ ನೇತೃತ್ವದಲ್ಲಿ ಕಪ್ಪು ಬಟ್ಟೆ ಧರಿಸಿ ವಿಧಾನಸಭೆ ಆವರಣದಲ್ಲಿನ ಬಿಆರ್ ಅಂಬೇಡ್ಕರ್ ಪ್ರತಿಮೆ ಬಳಿ ಬುಧವಾರ ಪ್ರತಿಭಟನೆ ನಡೆಸಿದ್ದಾರೆ. ಪ್ರತಿಭಟನೆ ಮುಕ್ತಾಯದ ವೇಳೆಗೆ ರಾಷ್ಟ್ರಗೀತೆ ಹಾಡಿದ್ದಾರೆ. ಇದೇ ಸಂದರ್ಭ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಭಾಗವಹಿಸಿದ್ದ ಪಕ್ಷದ ಮೆಗಾ ರ್ಯಾಲಿಗೆ ತೆರಳಲು ವಿಪಕ್ಷ ನಾಯಕನ ನೇತೃತ್ವದ ಬಿಜೆಪಿ ಶಾಸಕರ ಗುಂಪು ವಿಧಾನಸಭೆ ಆವರಣಕ್ಕೆ ಆಗಮಿಸಿದೆ. ವಿಪಕ್ಷ ನಾಯಕ ಸೇರಿದಂತೆ ಶಾಸಕರು ರಾಷ್ಟ್ರಗೀತೆ ಹಾಡುತ್ತಿದ್ದ ಪ್ರತಿಭಟನಾನಿರತರನ್ನು ನೋಡಿ ‘ಕಳ್ಳರು, ಕಳ್ಳರು’ ಎಂದು ಘೋಷಣೆಗಳನ್ನು ಕೂಗಿದ್ದಾರೆ.

ಆಡಳಿತ ಪಕ್ಷದ ಶಾಸಕರು ರಾಷ್ಟ್ರಗೀತೆ ಹಾಡುತ್ತಿದ್ದಾಗ ಬಿಜೆಪಿ ಶಾಸಕರು ಘೋಷಣೆಗಳನ್ನು ಕೂಗಿ ರಾಷ್ಟ್ರಗೀತೆಗೆ ಅವಮಾನ ಮಾಡಿದ್ದಾರೆ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸ್ಪೀಕರ್ ಬಿಮನ್ ಬಂಡೋಪಾಧ್ಯಾಯ ಅವರಿಗೆ ದೂರು ನೀಡಿದ್ದಾರೆ ಅಗತ್ಯ ಕಾನೂನು ಕ್ರಮಗಳನ್ನು ಕೈಗೊಳ್ಳುವಂತೆ ಸ್ಪೀಕರ್ಗೆ ಮನವಿ ಮಾಡಿದ್ದಾರೆ. ಸ್ಪೀಕರ್ ತಕ್ಷಣವೇ ಕೋಲ್ಕತ್ತಾ ಪೊಲೀಸ್‌ನ ಉಪ ಆಯುಕ್ತರನ್ನು ಕರೆದಿದ್ದಾರೆ. ಮೂವರು ತೃಣಮೂಲ ಕಾಂಗ್ರೆಸ್ ಶಾಸಕರು ಈ ಬಗ್ಗೆ ದೂರು ಪತ್ರವನ್ನು ಅವರಿಗೆ ನೀಡಿದ್ದಾರೆ. ಈ ದೂರಿನ ಆಧಾರದ ಮೇಲೆ 12 ಬಿಜೆಪಿ ಶಾಸಕರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.

Join Whatsapp