ಸಂಘಪರಿವಾರದ ಕಾರ್ಯಕರ್ತರಿಂದ ದಾಳಿಗೊಳಗಾಗಿದ್ದ ಕೋಳಿ ಮಾಂಸದಂಗಡಿ ಮಾಲೀಕನ ಮೇಲೆ ವಾಹನ ಹರಿಸಿದ ದುಷ್ಕರ್ಮಿಗಳು

Prasthutha|

ಬೆಳಗಾವಿ: ದೇವಸ್ಥಾನದಲ್ಲಿ ನವರಾತ್ರಿ ಆಚರಣೆ ಕಾರ್ಯಕ್ರಮದ ಸಂದರ್ಭದಲ್ಲಿ ಕೋಳಿಮಾಂಸದ ಅಂಗಡಿ ತೆರೆದಿದ್ದಕ್ಕೆ ಸಂಘಪರಿವಾರದ ಕಾರ್ಯಕರ್ತರಿಂದ ದಾಳಿಗೊಳಗಾಗಿದ್ದ ಅಂಗಡಿ ಮಾಲೀಕ ಹಸನ್ ಅವರ ಮೇಲೆ ಅಪರಿಚಿತ ವಾಹನ ಡಿಕ್ಕಿ ಹೊಡೆದು ಪರಾರಿಯಾಗಿದ್ದು, ಇದು ಪೂರ್ವ ನಿಯೋಜಿತ ಕೃತ್ಯ ಎನ್ನಲಾಗಿದೆ.

- Advertisement -


ಬೆಳಗಾವಿಯ ಹೊರ ವಲಯದ ಯಮನಾಪುರದಲ್ಲಿ ಕೋಳಿ ಅಂಗಡಿ ಇಟ್ಟುಕೊಂಡಿರುವ ಹಸನ್ ಸಾಬ್ ಮತ್ತು ಅವರ ಪತ್ನಿ ಅಫ್ಸಾನಾ ಬೈಕ್ ನಲ್ಲಿ ಹೋಗುತ್ತಿದ್ದಾಗ ದ್ವಿಚಕ್ರ ವಾಹನವೊಂದು ಡಿಕ್ಕಿ ಹೊಡೆಸಿ ಪರಾರಿಯಾಗಿದೆ.
ಹಸನ್ ಸಾಬ್ ಮತ್ತು ಅವರ ಪತ್ನಿ ಮಂಗಳವಾರ ರಾತ್ರಿ ಯಮನಾಪುರ ಕಡೆಗೆ ಬೈಕ್ ನಲ್ಲಿ ಹೋಗುತ್ತಿದ್ದಾಗ ಶ್ರೀನಗರ ಉದ್ಯಾನದ ಬಳಿ ವೇಗವಾಗಿ ಬಂದ ಮೊತ್ತೊಂದು ಬೈಕ್ ಡಿಕ್ಕಿಯಾಗಿ ಪರಾರಿಯಾಗಿದೆ. ಇದೊಂದು ಹಿಟ್ ಆ್ಯಂಡ್ ರನ್ ಪ್ರಕರಣವಾಗಿದ್ದು, ಇದರ ಹಿಂದೆ ವ್ಯವಸ್ಥಿತ ಸಂಚು ಅಡಗಿದೆ ಎಂದು ಸಂತ್ರಸ್ತ ಹಸನ್ ಆರೋಪಿಸಿದ್ದಾರೆ.


ಗಾಯಗೊಂಡ ದಂಪತಿಯನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.
ಯಮುನಾಪುರ ಗ್ರಾಮದ ದೇವಸ್ಥಾನದಲ್ಲಿ ನವರಾತ್ರಿ ಆಚರಣೆಯ ಸಂದರ್ಭದಲ್ಲಿ ಕೋಳಿಮಾಂಸದ ಅಂಗಡಿ ತೆರೆದಿದ್ದ ಕಾರಣಕ್ಕೆ ಸಂಘಪರಿವಾರದ ಗುಂಪೊಂದು ಹಸನ್ ಅವರ ಅಂಗಡಿ ಮೇಲೆ ದಾಳಿ ಮಾಡಿ, ಬ್ಯಾನರ್ ಹರಿದುಹಾಕಿತ್ತು. ಆ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು. ಇದರ ಬೆನ್ನಲ್ಲೇ ಮಂಗಳವಾರ ರಾತ್ರಿ ಅಪಘಾತ ನಡೆದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

- Advertisement -


‘ದ್ವಿಚಕ್ರವಾಹನದಲ್ಲಿ ವೇಗವಾಗಿ ಬಂದ ಇಬ್ಬರು ಡಿಕ್ಕಿ ಹೊಡೆದರು. ಇದರಿಂದ ನಾವಿಬ್ಬರೂ ಬಿದ್ದೆವು. ಪತಿಯ ಎಡಗಾಲು ಮತ್ತಿತರ ಕಡೆಗಳಲ್ಲಿ ಗಾಯವಾಗಿದೆ. ನನಗೆ ಸಣ್ಣಪುಟ್ಟ ಗಾಯವಾಗಿದೆ. ಡಿಕ್ಕಿ ಮಾಡಿದವರು ನಮ್ಮ ಕಡೆಗೆ ತಿರುಗಿಯೂ ನೋಡದೆ, ಸಹಾಯಕ್ಕೂ ಬಾರದೆ ಪರಾರಿಯಾದರು. ಇದೊಂದು ಪೂರ್ವಯೋಜಿತ ಕೃತ್ಯವಾಗಿದೆ ಎಂದು ಹಸನ್ ಪತ್ನಿ ಅಫ್ಸಾನಾ ಆರೋಪಿಸಿದ್ದಾರೆ.

Join Whatsapp