ಹೈದರಾಬಾದ್: ಅಹಮದಾಬಾದ್ ನ ಸಬರಮತಿ ಕೇಂದ್ರ ಕಾರಾಗೃಹದಲ್ಲಿರುವ ಮಾಜಿ ಸಂಸದ ಅತೀಕ್ ಅಹ್ಮದ್ ಅವರನ್ನು ಭೇಟಿ ಮಾಡಲು ತೆರಳಿದ್ದ ಎ.ಐ.ಎಂ.ಐ.ಎಂ ಮುಖ್ಯಸ್ಥ, ಸಂಸದ ಅಸದುದ್ದೀನ್ ಉವೈಸಿ ಅವರಿಗೆ ಇಂದು ಜೈಲು ಅಧಿಕಾರಿಗಳು ಅನುಮತಿ ನಿರಾಕರಿಸಿದ್ದಾರೆ.
ಇತ್ತೀಚೆಗೆ ಎ.ಐ.ಎಂ.ಐ.ಎಂ ಪಕ್ಷ ಸೇರ್ಪಡೆಯಾದ ಮತ್ತು ಪ್ರಸಕ್ತ ಗುಜರಾತ್ ಜೈಲಿನಲ್ಲಿರುವ ಮಾಜಿ ಸಂಸದ ಅತೀಕ್ ಅಹ್ಮದ್ ಅವರ ಭೇಟಿಗೆ ತೆರಳಿದ್ದ ಹೈದರಾಬಾದ್ ಸಂಸದರಿಗೆ ಅನುಮತಿ ನಿರಾಕರಿಸಲಾಗಿದೆ. ಅವರು ಎ.ಐ.ಎಂ.ಐ.ಎಂ ನ ಕೆಲವು ನಾಯಕರೊಂದಿಗೆ ಅಹಮದಾಬಾದ್ ತಲುಪಿ ಅತೀಕ್ ಅವರನ್ನು ಭೇಟಿ ನಡೆಸಿ ಮಾತುಕತೆಗೆ ಪ್ರಯತ್ನ ನಡೆಸಿದ್ದರು.
ಈ ಕುರಿತು ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಅವರು, ಕೋವಿಡ್ ಮಾರ್ಗಸೂಚಿಯ ಹಿನ್ನೆಲೆಯಲ್ಲಿ ಕೇಂದ್ರ ಕಾರಾಗೃಹದ ಎಸ್ಪಿಯವರು ಕೊನೆಯ ಗಳಿಗೆಯಲ್ಲಿ ಅನುಮತಿಯನ್ನು ನಿರಾಕರಿಸಿದ್ದಾರೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಉವೈಸಿ ಅವರ ಜೊತೆ ಔರಂಗಬಾದ್ ಸಂಸದ ಇಮ್ತಿಯಾಝ್ ಜಲೀಲ್, ಎ.ಐ.ಎಂ.ಐ.ಎಂ ಗುಜರಾತ್ ರಾಜ್ಯಾಧ್ಯಕ್ಷ ಸಬೀರ್ ಕಬ್ಲಿವಾಲ, ಗ್ರೇಟರ್ ಹೈದರಾಬಾದ್ ನ ಮಾಜಿ ಮೇಯರ್ ಹಾಗೂ ಉತ್ತರಪ್ರದೇಶದ ಎ.ಐ.ಎಂ.ಐ.ಎಂ ಉಸ್ತುವಾರಿ ಮಜೀದ್ ಉಪಸ್ಥಿತರಿದ್ದರು.