ಬೆಳಗಾವಿ: ಜಿಲ್ಲೆಯಲ್ಲಿ ಪ್ರವಾಹದಿಂದ ಸಂತ್ರಸ್ತರಾಗುವ ಜನರಿಗೆ ಅಗತ್ಯವಿರುವ ಕಡೆಗಳಲ್ಲಿ ಹೊಸದಾಗಿ ಬಡವಾಣೆ ಅಭಿವೃದ್ಧಿಪಡಿಸಿ ನೀರು, ವಿದ್ಯುತ್ ಸೇರಿ ಎಲ್ಲ ಮೂಲಸೌಕರ್ಯಗಳನ್ನು ಕಲ್ಪಿಸಿ ನಿವೇಶನ ಹಂಚಿಕೆಗೆ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಎಂ ಕಾರಜೋಳ ಅಧಿಕಾರಿಗಳಿಗೆ ಸೂಚನೆ ನೀಡಿದರು. ನಗರದ ಪ್ರವಾಸಿಮಂದಿರದಲ್ಲಿ ಶುಕ್ರವಾರ ನಡೆದ ಕೋವಿಡ್ ಹಾಗೂ ಪ್ರವಾಹ ಸ್ಥಿತಿ ನಿರ್ವಹಣೆ ಕುರಿತ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.
ಪುನರ್ವಸತಿ ಕಾಯ್ದೆ ಪ್ರಕಾರ ಸಂತ್ರಸ್ತರಿಗೆ 40×60 ಅಳತೆಯ ನಿವೇಶನದಲ್ಲಿ ಸೂರು ಒದಗಿಸಲು ಸಮರ್ಪಕ ಯೋಜನೆ ರೂಪಿಸಬೇಕು ಎಂದು ಹೇಳಿದರು. ಮುಳುಗಡೆಯಾಗುವ ಗ್ರಾಮಗಳ ಜನರಿಗೆ ತಾತ್ಕಾಲಿಕ ಶೆಡ್ ನಿರ್ಮಿಸಿ ಮೂಲಸೌಕರ್ಯವನ್ನು ಒದಗಿಸಬೇಕು. ಈ ಹಿಂದೆ 2009-10 ನೇ ಸಾಲಿನಲ್ಲಿ ಪ್ರವಾಹ ಬಂದಾಗ ಕೆಲ ಗ್ರಾಮಗಳನ್ನು ಸ್ಥಳಾಂತರಿಸಿ ‘ಆಸರೆ’ ಮನೆಗಳನ್ನು ನೀಡಲಾಗಿತ್ತು. ಈ ಬಗ್ಗೆ ಪರಿಶೀಲಿಸಿ ಮಾಹಿತಿಯನ್ನು ಒದಗಿಸಬೇಕು ಎಂದು ತಿಳಿಸಿದರು.
ನದಿತೀರದ ಪ್ರದೇಶಗಳಲ್ಲಿ ಮಳೆ ಹಾಗೂ ನೀರು ಹರಿವು ಪ್ರಮಾಣಕ್ಕೆ ಸಂಬಂಧಿಸಿದಂತೆ ಪ್ರವಾಹ ಮುನ್ಸೂಚನೆ ವ್ಯವಸ್ಥೆಯನ್ನು ಬಲಪಡಿಸಲು ತಂತ್ರಜ್ಞಾನ ಆಧಾರಿತ ಮುನ್ಸೂಚನೆ ವ್ಯವಸ್ಥೆ ಕಲ್ಪಿಸಲು ಸೂಕ್ತ ಪ್ರಸ್ತಾವ ಸಲ್ಲಿಸುವಂತೆ ತಿಳಿಸಿದರು. ಜಿಲ್ಲೆಯಲ್ಲಿ ಇತ್ತೀಚಿಗೆ ಸುರಿದ ಮಳೆಯಿಂದ ಮನೆ ಕಳೆದುಕೊಂಡಿರುವ ಕುಟುಂಬಗಳಿಗೆ ಸರಕಾರ ಘೋಷಿಸಿರುವ ಹತ್ತು ಸಾವಿರ ರೂಪಾಯಿ ಪರಿಹಾರದ ಹಣವನ್ನು ಆರ್.ಟಿ.ಜಿ.ಎಸ್. ಮೂಲಕ ಆಯಾ ಕುಟುಂಬಗಳಿಗೆ ಪಾವತಿಸಬೇಕು ಎಂದು ಉಸ್ತುವಾರಿ ಸಚಿವ ಶ್ರೀ ಗೋವಿಂದ ಕಾರಜೋಳ ಸೂಚನೆ ನೀಡಿದರು.
ಅತಿವೃಷ್ಟಿಯಿಂದ ಜಿಲ್ಲೆಯಲ್ಲಿ ಪ್ರಾಥಮಿಕ ಅಂದಾಜಿನ ಪ್ರಕಾರ ಬೆಳೆ, ರಸ್ತೆ, ಸೇತುವೆ ಇತರ ಮೂಲಸೌಕರ್ಯಗಳು ಸೇರಿದಂತೆ ಒಟ್ಟಾರೆ 7800 ಕೋಟಿ ರೂಪಾಯಿ ಹಾನಿಯಾಗಿದೆ. 21300 ವಿದ್ಯುತ್ ಕಂಬಗಳು ಹಾಗೂ 5300 ಟ್ರಾನ್ಸ್ ಫಾರ್ಮರ್ ನೀರಿನಲ್ಲಿ ಮುಳುಗಡೆಯಾಗಿವೆ. ನೀರು ಕಡಿಮೆಯಾದ ಬಳಿಕ ಹಾನಿ ಅಂದಾಜು ಮಾಡಬೇಕು ಎಂದು ತಿಳಿಸಿದರು.
ಜಂಟಿ ಸಮೀಕ್ಷೆ ಕೂಡಲೇ ಪೂರ್ಣಗೊಳಿಸಬೇಕು. ಜಮೀನಿನಲ್ಲಿ ನೀರಿರುವುದರಿಂದ ಒಂದು ವೇಳೆ ಸಮೀಕ್ಷೆಗೆ ಅಡ್ಡಿಯಾದರೆ ಜಿ.ಪಿ.ಎಸ್.ಆಧಾರಿತ ಸಮೀಕ್ಷೆಯ ಸಾಧ್ಯತೆ ಕುರಿತು ಪರಿಶೀಲಿಸಬೇಕು ಎಂದು ಸಚಿವ ಶ್ರೀ ಗೋವಿಂದ ಕಾರಜೋಳ ಸಲಹೆ ನೀಡಿದರು.
ಮಳೆಯಿಂದ ವಿದ್ಯುತ್ ಪೂರೈಕೆ ತೊಂದರೆಯಾದ ಕಡೆಗಳಲ್ಲಿ ತಕ್ಷಣವೇ ವಿದ್ಯುತ್ ಪೂರೈಕೆಗೆ ಕ್ರಮ ವಹಿಸಬೇಕು. ಒಂದು ವೇಳೆ ಪ್ರವಾಹ ಉಂಟಾದರೆ ನಂತರದ ದಿನಗಳಲ್ಲಿ ಕೂಡಲೇ ವಿದ್ಯುತ್ ಸಂಪರ್ಕ ಕಲ್ಪಿಸಲು ಅನುಕೂಲವಾಗುವಂತೆ ಅಗತ್ಯ ಪರಿಕರಗಳನ್ನು ದಾಸ್ತಾನು ಇಟ್ಟುಕೊಳ್ಳಬೇಕು ಎಂದು ಹೆಸ್ಕಾಂ ಅಧಿಕಾರಿಗಳಿಗೆ ತಿಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ, ಡಿಸಿಪಿ ವಿಕ್ರಮ್ ಆಮಟೆ, ಅಪರ ಜಿಲ್ಲಾ ಅಶೋಕ ದುಡಗುಂಟಿ ಸೇರಿದಂತೆ ವಿವಿಧ ಇಲಾಖೆಯ ಜಿಲ್ಲಾಮಟ್ಟದ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.