ಬೆಂಗಳೂರು: ರಾಜ್ಯದಲ್ಲಿರುವ 48 ಸಾವಿರ ಸರ್ಕಾರಿ ಶಾಲೆಗಳ ಪೈಕಿ ಸುಮಾರು 29 ಸಾವಿರ ಸರ್ಕಾರಿ ಶಾಲೆಗಳ ಆಸ್ತಿ ದಾಖಲೆಗಳು ಸಮರ್ಪಕವಾಗಿದ್ದು, ಉಳಿದ ಶಾಲೆಗಳ ಆಸ್ತಿ ನೋಂದಣಿ ಮಾಡುವುದಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಹಾಗೂ ಸಕಾಲ ಸಚಿವರು ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ. ನಾಗೇಶ್ ತಿಳಿಸಿದರು.
ಸಮಗ್ರ ಶಿಕ್ಷಣ ಕರ್ನಾಟಕ ಕಚೇರಿಯಲ್ಲಿ ಬುಧವಾರ ಸಭೆ ನಡೆಸಿದ ಬಳಿಕ ಸುದ್ದಿಗಾರರ ಜೊತೆ ಸಚಿವರು ಮಾತನಾಡಿದರು.
‘ಆಗಸ್ಟ್‌ನಿಂದ ಅಕ್ಟೋಬರ್‌ವರೆಗೆ ಸರ್ಕಾರಿ ಶಾಲಾ, ಕಾಲೇಜುಗಳ ಆಸ್ತಿ ಸಂರಕ್ಷಣಾ ಅಭಿಯಾನ ನಡೆಸಲಾಗುತ್ತಿದೆ. ಶಾಲೆಯ ಆಸ್ತಿ ದಾಖಲೆಗಳನ್ನು ಶಿಸ್ತುಬದ್ಧಗೊಳಿಸಿ ನೋಂದಣಿ ಮಾಡಿಸಬೇಕು ಎಂದು ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ. ಕಂದಾಯ ಇಲಾಖೆ ಹಾಗೂ ಇನ್ನುಳಿದ ಸಂಬಂಧಪಟ್ಟ ಇಲಾಖೆಗಳ ಸಂಯೋಜನೆಯಲ್ಲಿ ಈ ಕಾರ್ಯ ನಡೆಯಲಿದೆ. ರಾಜ್ಯದ 48 ಸಾವಿರ ಸರ್ಕಾರಿ ಶಾಲೆಗಳ ಪೈಕಿ ಸುಮಾರು 29 ಸಾವಿರ ಶಾಲೆಗಳ ದಾಖಲೆಗಳು ನೋಂದಣಿಯಾಗಿವೆ. ಇನ್ನುಳಿದ ಶಾಲೆಗಳ ದಾಖಲೆಗಳನ್ನು ಶಿಸ್ತುಬದ್ಧಗೊಳಿಸಲು ನಿರ್ದೇಶನ ನೀಡಲಾಗಿದೆ’ ಎಂದು ಸಚಿವರು ಹೇಳಿದರು.
‘ಕಾನೂನಾತ್ಮಕ ಸಮಸ್ಯೆಗಳು, ಶಿಕ್ಷಣ ಇಲಾಖೆಯ ಆಸ್ತಿಯಾಗಿದ್ದರೂ ನೋಂದಣಿಯಾಗದೇ ಇರುವುದು, ಇತರ ಇಲಾಖೆಗಳಿಂದ ಶಿಕ್ಷಣ ಇಲಾಖೆಗೆ ನೀಡಿರುವುದು, ಖಾಸಗಿ ಸಂಸ್ಥೆ, ವ್ಯಕ್ತಿಗಳಿಂದ ದಾನ ಪಡೆದಿರುವುದು ಸೇರಿದಂತೆ ಎಲ್ಲ ರೀತಿಯ ಶಾಲೆಗಳ ಆಸ್ತಿಯನ್ನು ನೋಂದಣಿ ಮಾಡಲು ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ ಎಂದು ನುಡಿದರು.
‘ಚಿಕ್ಕಪೇಟೆಯಲ್ಲಿ 1945ರಿಂದ ನಡೆಯುತ್ತಿರುವ ಸರ್ಕಾರಿ ಶಾಲೆಯ ಆಸ್ತಿ ದಾಖಲೆಗಳನ್ನು ಶಿಕ್ಷಣ ಇಲಾಖೆಗೆ ವರ್ಗಾಯಿಸುವಂತೆ ಕಂದಾಯ ಇಲಾಖೆಗೆ ಕೋರಲಾಗಿದೆ. ಈ ಬಗ್ಗೆ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಕಂದಾಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ’ ಎಂದು ಪತ್ರಕರ್ತರ ಪ್ರಶ್ನೆಯೊಂದಕ್ಕೆ ಸಚಿವ ನಾಗೇಶ್ ಉತ್ತರಿಸಿದರು.
ಸರ್ಕಾರಿ ಶಾಲೆಗಳ ಆಸ್ತಿ ಸಂರಕ್ಷಣೆಗೆ ವಿಶೇಷ ಕ್ರಮ ವಹಿಸಿದ ಪರಿಣಾಮ ಕಳೆದ ಕೆಲವೇ ತಿಂಗಳಲ್ಲಿ ಸುಮಾರು 2,500ಕ್ಕೂ ಹೆಚ್ಚು ಸರ್ಕಾರಿ ಶಾಲೆಗಳ ಆಸ್ತಿಗಳು ನೋಂದಣಿಯಾಗಿವೆ ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.