ಬೆಂಗಳೂರು: ಕಾಶ್ಮೀರದಿಂದ ಕನ್ಯಾಕುಮಾರಿವರೆಗೂ ನಮ್ಮ ಕಾರ್ಯಕರ್ತರು ಇದ್ದಾರೆ. ಪ್ರತಿ ರಾಜ್ಯದಲ್ಲಿಯೂ ನಮ್ಮ ಪಕ್ಷದ ಶಾಸಕರು ಇರಬೇಕು ಎಂದು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರು ಹೇಳಿದರು.
ಕರ್ನಾಟಕದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬಂದೆ ಬರುತ್ತದೆ. ಇದನ್ನು ಯಾರೂ ತಪ್ಪಿಸಲು ಸಾಧ್ಯವಿಲ್ಲ ಎಂದು ಅವರು ಅಚಲ ವಿಶ್ವಾಸ ವ್ಯಕ್ತಪಡಿಸಿದರು.
ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಇಂದು ನಡೆದ ಪಕ್ಷದ ರಾಷ್ಟ್ರೀಯ ಪರಿಷತ್ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ನನ್ನನ್ನು ರಾಷ್ಟ್ರೀಯ ಅಧ್ಯಕ್ಷರಾಗಿ ಮರು ಆಯ್ಕೆ ಮಾಡಿದ್ದಕ್ಕೆ ಕಾರ್ಯಕಾರಿಣಿ ಸಮಿತಿಗೆ ಧನ್ಯವಾದ ಹೇಳಿದರು.
ನಿನ್ನೆ ರಾಷ್ಟ್ರೀಯ ಕಾರ್ಯಕಾರಿಣಿ ನಡೆದಿದೆ. ಇಂದು ಮಹಾ ಅಧಿವೇಶನದಲ್ಲಿ 3 ನಿರ್ಣಯ ಅಂಗೀಕಾರವಾಗಿದೆ. ಕಾರ್ಯಕ್ರಮಕ್ಕೆ ಬಂದಿರುವ ಕೇರಳ ಮಂತ್ರಿಗಳಿಗೂ ಧನ್ಯವಾದ ತಿಳಿಸುವುದಾಗಿ ಮಾಜಿ ಪ್ರಧಾನ ಮಂತ್ರಿಗಳು ಹೇಳಿದರು.
ಇದೊಂದು ಅತ್ಯುತ್ತಮ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ. ಲಕ್ಷಾಂತರ ಕಾರ್ಯಕರ್ತರು ಈ ಪಕ್ಷದ ಬೆನ್ನೆಲುಬು ಆಗಿದ್ದಾರೆ. ಕಾಂಗ್ರೆಸ್-ಬಿಜೆಪಿ ಬಗ್ಗೆ ಚರ್ಚೆ ಬೇಡ. ನಮ್ಮ ಕೆಲಸ ನಾವು ಪ್ರಾಮಾಣಿಕವಾಗಿ ಮಾಡಬೇಕು. ಹೆಚ್.ಡಿ.ಕುಮಾರಸ್ವಾಮಿ ಅವರು ಪಂಚರತ್ನ ರಥಯಾತ್ರೆ ಕಾರ್ಯಕ್ರಮ ಮಾಡುತ್ತಿದ್ದಾರೆ. ಜನತಾ ಜಲಧಾರೆ ಮಾಡಿದ್ದರು. ಇವೆಲ್ಲವೂ ಜನರ ಅಭಿವೃದ್ಧಿ ಕಾರ್ಯಕ್ರಮಗಳು ಎಂದರು.
ನಾವೆಲ್ಲರೂ ಪಕ್ಷ ಕಟ್ಟುವ ಕೆಲಸ ಮಾಡೋಣ. ಕಾಂಗ್ರೆಸ್ ಮತ್ತು ಬಿಜೆಪಿ ಬಗ್ಗೆ ಮಾತನಾಡುವುದು ಬೇಡ. ಪ್ರತಿ ರಾಜ್ಯದ ಒಂದು ಕ್ಷೇತ್ರದಲ್ಲಾದರೂ ಒಬ್ಬರಾದರೂ ನಮ್ಮ ಶಾಸಕರು ಇರಬೇಕು. ಈ ನಿಟ್ಟಿನಲ್ಲಿ ಎಲ್ಲರೂ ಕೆಲಸ ಮಾಡಬೇಕು. ನಮ್ಮ ಕೆಲಸ ನಾವು ಪ್ರಮಾಣಿಕವಾಗಿ ಮಾಡಬೇಕು. ಕುಮಾರಸ್ವಾಮಿ ಅವರು ಪಂಚರತ್ನ ಕಾರ್ಯಕ್ರಮ ರಥಯಾತ್ರೆ ಮಾಡುತ್ತಿದ್ದಾರೆ. ಜನತಾ ಜಲಧಾರೆ ಕಾರ್ಯಕ್ರಮವನ್ನು ದೊಡ್ಡ ಮಟ್ಟದಲ್ಲಿ ಮಾಡಿದರು. ಈಗ ರಾಜ್ಯದ ಉದ್ದಗಲಕ್ಕೂ ಪಂಚರತ್ನ ರಥಯಾತ್ರೆ ಹೊರಟಿದ್ದಾರೆ. ಅವರಿಗೆ ಶಕ್ತಿ ತುಂಬುವ ಕೆಲಸ ಮಾಡೋಣ ಎಂದು ಮಾಜಿ ಪ್ರಧಾನ ಮಂತ್ರಿಗಳು ಕರೆ ನೀಡಿದರು.
ಕೇರಳದ ಇಂಧನ ಸಚಿವ ಕೃಷ್ಣನ್ ಕುಟ್ಟಿ, ಕೇರಳ ಶಾಸಕ ಮ್ಯೂಥ್ಯೂ ಟಿ.ಥಾಮಸ್, ಶಾಸಕರು ಹಾಗೂ ಅಧ್ಯಕ್ಷರು, ಕೇರಳ ಜೆಡಿಎಸ್ ಘಟಕದ ಅಧ್ಯಕ್ಷ ನಾಡಾರ್, ಕೇರಳದ ಮಾಜಿ ಶಾಸಕ ನಾನಾ, ತಮಿಳುನಾಡು ಘಟಕದ ಅಧ್ಯಕ್ಷ ಪೊನ್ನುಸ್ವಾಮಿ, ಪಶ್ಚಿಮ ಬಂಗಾಳ ಜೆಡಿಎಸ್ ಘಟಕದ ಅಧ್ಯಕ್ಷ ಪುನೀತ್ ಕುಮಾರ್ ಸಿಂಗ್, ರಾಜ್ಯದ ಅಧ್ಯಕ್ಷ ಸಿಎಂ ಇಬ್ರಾಹಿಂ, ಗುಜರಾತ್ ಘಟಕದ ಅಧ್ಯಕ್ಷ ಜ್ಞಾನಭಾಯ್ ಶಾ ಸೇರಿದಂತೆ ಉತ್ತರ ಪ್ರದೇಶ, ಬಿಹಾರ ಸೇರಿ ವಿವಿಧ ರಾಜ್ಯಗಳ ಘಟಕ ಅಧ್ಯಕ್ಷರು, ಕಾರ್ಯಕಾರಿ ಸಮಿತಿ ಸದಸ್ಯರು ಹಾಜರಿದ್ದರು.