ಚಿಕಾಗೊ: ಗಾಝಾದ ಯುದ್ಧವನ್ನು ಇಸ್ರೇಲ್‍ನ ಯುದ್ಧವೆಂದು ಕರೆಯುವುದು ತಪ್ಪೆನಿಸುತ್ತದೆ. ಇದು ಅಮೆರಿಕದ ಯುದ್ಧ. ಇದರ ಜವಾಬ್ದಾರಿಯ ಅಮೆರಿಕನ್ನರದ್ದು. ಅಮೆರಿಕ ಮನಸ್ಸು ಮಾಡಿದರೆ ಕಣ್ಣು ಮಿಟುಕಿಸುವ ಒಳಗೆ ಇದನ್ನು ನಿಲ್ಲಿಸಬಹುದು ಎಂದು ಅಮೆರಿಕದ ಅಧ್ಯಕ್ಷೀಯ ಚುನಾವಣೆಯ ಅಭ್ಯರ್ಥಿ ಡಾ. ಜಿಲ್ ಸ್ಟೈನ್ ಹೇಳಿದ್ದಾರೆ.
ಗಾಝಾದಲ್ಲಿ ಅಮಾಯಕ ನಾಗರಿಕರನ್ನು, ಮಹಿಳೆಯರನ್ನು ಮಕ್ಕಳನ್ನು ಕೊಲ್ಲಲು ಬಳಸುವ ಶಸ್ತ್ರಾಸ್ತ್ರಗಳಲ್ಲಿ ಶೇ. 80ನ್ನು ಅಮೆರಿಕ ಒದಗಿಸುತ್ತಿದೆ. ಗಾಝಾದಲ್ಲಿನ ಹಿಂಸಾಚಾರದ ಹೊಣೆಯನ್ನು ಅಮೆರಿಕ ವಹಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಜತೆಗೆ, ಆರ್ಥಿಕ, ಮಿಲಿಟರಿ ನೆರವು, ರಾಜತಾಂತ್ರಿಕ ರಕ್ಷಣೆ, ಗುಪ್ತಚರ ನೆರವನ್ನೂ ನೀಡುತ್ತಿದ್ದೇವೆ. ಆದ್ದರಿಂದ ಇಲ್ಲಿ ಅಮೆರಿಕ ಸಂಪೂರ್ಣ ಸ್ವಾಯತ್ತೆಯನ್ನು ಹೊಂದಿದೆ ಎಂದ ಅವರು `ಹತ್ಯಾಕಾಂಡ’ವನ್ನು ಅನುಮೋದಿಸದಂತೆ ಮತದಾರರಿಗೆ ಕರೆ ನೀಡಿದ್ದಾರೆ.
ಅಮೆರಿಕ ಗ್ರೀನ್ ಪಾರ್ಟಿಯಿಂದ ನವೆಂಬರ್‌ನಲ್ಲಿ ನಡೆಯಲಿರುವ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಟೈನ್ ಕಣಕ್ಕಿಳಿದಿದ್ದಾರೆ.
ಗಾಝಾದಲ್ಲಿ ಈಗ ನಡೆಯುತ್ತಿರುವ ಮಕ್ಕಳ ಚಿತ್ರಹಿಂಸೆ ಮತ್ತು ಕೊಲೆಯನ್ನು ಸಾಮಾನ್ಯೀಕರಿಸುತ್ತಿದೆ. ಅಂತಾರಾಷ್ಟ್ರೀಯ ಕಾನೂನು ಮತ್ತು ಮಾನವ ಹಕ್ಕುಗಳನ್ನು ನಾಶಗೊಳಿಸಲಾಗುತ್ತಿದೆ. ಇದಕ್ಕೆ ನಾವು ಅನುಮತಿಸಿದರೆ, ಅಂತಿಮವಾಗಿ ಅದು ನಮಗೇ ತಿರುಗು ಬಾಣವಾಗಲಿದೆ. ತನ್ನ ಪರ ಮತ್ತು ಗ್ರೀನ್ ಪಾರ್ಟಿ ಪರ ಚಲಾವಣೆಯಾಗುವ ಒಂದೊಂದು ಮತಗಳು ಕೂಡ ಗಾಝಾದಲ್ಲಿನ ಯುದ್ಧ ಮಾತ್ರವಲ್ಲ, ವಿಶ್ವದಾದ್ಯಂತದ ಇತರ ಹಲವು ಸಂಘರ್ಷಗಳನ್ನು ನಿಲ್ಲಿಸಲು ನೆರವಾಗಲಿದೆ ಎಂದವರು ಪ್ರತಿಪಾದಿಸಿದ್ದಾರೆ.