ಭುವನೇಶ್ವರ: ದಾಲ್ಮಿಯಾ ಸಿಮೆಂಟ್ಸ್ ಕಂಪೆನಿಯ ಒಡೆತನದಲ್ಲಿರುವ ಸುಣ್ಣದ ಕಲ್ಲು ಗಣಿಗಾರಿಕೆಗಾಗಿ ಸರ್ಕಾರ ಭೂಮಿಯನ್ನು ವಶಪಡಿಸಿಕೊಂಡಿರುವುದನ್ನು ವಿರೋಧಿಸಿ ಒಡಿಶಾದ ಒರಾನ್, ಕಿಸಾನ್ ಮತ್ತು ಖಾರಿಯಾ ಸಮುದಾಯಗಳ ಸುಮಾರು 5000 ಆದಿವಾಸಿಗಳು 65 ಕಿ.ಮೀ ಕಾಲ್ನಡಿಗೆ ಜಾಥಾವನ್ನು ಹಮ್ಮಿಕೊಂಡಿದ್ದಾರೆ.
ರಾಜ್’ಗಂಗ್’ಪುರದಲ್ಲಿರುವ ದಾಲ್ಮಿಯಾ ಸಿಮೆಂಟ್ ಭಾರತ್ ಲಿಮಿಟೆಡ್ ಅಥವಾ ಒಸಿಎಲ್’ನ ಸ್ಥಾವರ ವಿಸ್ತರಣೆಗಾಗಿ ಐದು ಪಂಚಾಯತ್ ಗಳಿಗೆ ಸೇರಿದ 77 ಎಕ್ರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವ ಕುರಿತು ಆದಿವಾಸಿಗಳು ಜಿಲ್ಲಾಧಿಕಾರಿ ಕಚೇರಿಗೆ ಕಾಲ್ನಡಿಗೆ ಜಾಥಾವನ್ನು ಹಮ್ಮಿಕೊಂಡಿದ್ದರು.
ದೀರ್ಘಕಾಲದ ತಮ್ಮ ಪ್ರತಿಭಟನೆಗೆ ಬೆಲೆ ಕೊಡದ ಜಿಲ್ಲಾಡಳಿತದ ವಿರುದ್ಧ ಅವರು ಘೋಷಣೆ ಕೂಗುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಅರಣ್ಯ ನಮ್ಮ ತಾಯಿಯಾಗಿದ್ದು, ಅದರಲ್ಲಿ ರಾಜಿಮಾಡಿಕೊಳ್ಳಲು ಯಾವುದೇ ಆಮಿಷಕ್ಕೆ ಬಲಿಯಾಗುವುದಿಲ್ಲ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.