ಮೂಡಿಗೆರೆ: ಲಕ್ಷ ದ್ವೀಪದ ಭಾಗದಲ್ಲಿ ಮೇಲ್ಮೈ ಸುಳಿಗಾಳಿ ಉಂಟಾದ ಪರಿಣಾಮ ಮಲೆನಾಡು ಭಾಗದಲ್ಲಿ ಇಂದು ಹಾಗೂ ನಾಳೆ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಮೇ 17 ಹಾಗೂ 18 ರಂದು ಆರೆಂಜ್ ಅಲರ್ಟ್ ಅನ್ನು ಹವಾಮಾನ ಇಲಾಖೆ ಘೋಷಿಸಿದೆ ಹಾಗೂ ಜೂನ್ 19 ನೆಯ ತಾರೀಕು ಹಾಗೂ 20 ರಂದು ಎಲ್ಲೋ ಅಲರ್ಟ್ ಘೋಷಣೆ ಮಾಡಿದೆ.
ಲಕ್ಷ ದ್ವೀಪದ ಭಾಗದಲ್ಲಿ ಮೇಲ್ಮೈ ಸುಳಿಗಾಳಿ ಸಂಭವಿಸಿದ ಪರಿಣಾಮ ಮಳೆಯಾಗುವ ಸಾಧ್ಯತೆಗಳಿವೆ ಎಂಬ ಮುನ್ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆ ನೀಡಿದೆ. ಈ ನಿಟ್ಟಿನಲ್ಲಿ ಮಲೆನಾಡು ಭಾಗದ ರೈತರು ಕೃಷಿ ಚಟುವಟಿಕೆಗಳನ್ನು 3-4 ದಿನಗಳ ಕಾಲ ಮುಂದೂಡುವುದು ಅತ್ಯಂತ ಸೂಕ್ತವಾದುದು ಎಂದು ಜಿಲ್ಲಾ ಕೃಷಿ ಹವಾಮಾನ ಘಟಕ ತಿಳಿಸಿದೆ.
ಕಳೆದ ಕೆಲ ದಿನಗಳಿಂದ ಮಲೆನಾಡು ಭಾಗದಲ್ಲಿ ನಿರಂತರವಾಗಿ ಮಳೆಯಾಗುತ್ತಿದ್ದು, ಮಳೆಯಿಂದಾಗಿ ಅಲ್ಲಲ್ಲಿ ಕೆಲ ಅವಘಡಗಳು ಸಂಭವಿಸಿವೆ. ಗಾಳಿ ಮಳೆಯಾಗುತ್ತಿರುವ ಈ ಸಮಯದಲ್ಲಿ ಕೃಷಿಕರು ಹಾಗೂ ಹೊರಾಂಗಣದಲ್ಲಿ ಕಾರ್ಯ ನಿರ್ವಹಣೆ ಮಾಡುವವರು ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಿ ತಮ್ಮ ಕಾರ್ಯಗಳನ್ನು ನಡೆಸಬೇಕೆಂದು ತಿಳಿಸಿದ್ದಾರೆ.