ಝಮೀರ್ ವಿರುದ್ಧದ ಪ್ರತಿಭಟನೆ ವಾಪಸ್ ಪಡೆದ ಪ್ರತಿಪಕ್ಷಗಳು

Prasthutha|

ಬೆಳಗಾವಿ: ಸಚಿವ ಝಮೀರ್ ಅಹ್ಮದ್ ಖಾನ್ ಹಿಂದೆ ಹೇಳಿಕೆಯೊಂದನ್ನು ವಿರೋಧಿಸಿ ಪ್ರತಿಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ನಿನ್ನೆಯಿಂದ ನಡೆಸುತ್ತಿದ್ದ ಧರಣಿಯನ್ನು ಇಂದು ವಾಪಸ್ ಪಡೆದಿದ್ದಾರೆ. ವಿಧಾನಸಭೆಯ ಕಲಾಪದ ಆರಂಭದಲ್ಲೇ ವಿಪಕ್ಷಗಳ ಶಾಸಕರು ಧರಣಿಯನ್ನು ಮುಂದುವರೆಸಿದ್ದರೂ ಗೃಹಸಚಿವ ಪರಮೇಶ್ವರ್ ಮಾಡಿದ ತೀಕ್ಷ್ಣವಾದ ಮಾತಿನಿಂದ ಕೂಡಿದ ಮನವಿಗೆ ಸ್ಪಂದಿಸಿದ ಪ್ರತಿಪಕ್ಷಗಳು ಧರಣಿಯಿಂದ ಹಿಂದೆ ಸರಿದಿವೆ.

- Advertisement -

ಗೃಹಸಚಿವ ಪರಮೇಶ್ವರ್, ಇಡೀ ದೇಶವೇ ನಮ್ಮನ್ನು ನೋಡುತ್ತಿದೆ. ಇಲ್ಲಿ ಗಂಭೀರ ಚರ್ಚೆಗಳು ನಡೆಯಬೇಕು. ನಿನ್ನೆಯಿಂದಲೂ ಧರಣಿ ನಡೆಸುತ್ತಿದ್ದೀರಿ, ಇದರಿಂದಾಗಿ ಪ್ರಶ್ನೋತ್ತರ ಕಲಾಪ, ಶೂನ್ಯವೇಳೆ ಗಮನ ಸೆಳೆಯುವ ಸೂಚನೆ. ಶಾಸನ ರಚನೆ ಸೇರಿದಂತೆ ಮಹತ್ವದ ಕಲಾಪಗಳಲ್ಲಿ ಪ್ರತಿಪಕ್ಷಗಳ ಶಾಸಕರು ಭಾಗವಹಿಸದಂತಾಗಿದೆ. ಇದು ಅತ್ಯಂತ ವಿಷಾದನೀಯ ಎಂದು ಹೇಳಿದರಲ್ಲದೆ, ಬರದ ಮೇಲೆ ಚರ್ಚೆಯಾಗಿದೆ. ಉತ್ತರ ಕರ್ನಾಟಕ ಭಾಗದ ಅಭಿವೃದ್ಧಿ ಕುರಿತು ಚರ್ಚೆಗಳು ನಡೆಯಬೇಕಿದೆ. ಅದರಲ್ಲಿ ಪ್ರತಿಪಕ್ಷಗಳು ಭಾಗವಹಿಸಬೇಕು. ರಾಜ್ಯದ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಬೇಕಿದೆ. ಈ ನಿಟ್ಟಿನಲ್ಲಿ ಧರಣಿ ಕೈಬಿಟ್ಟು ಕಲಾಪದಲ್ಲಿ ಭಾಗವಹಿಸಿ ಎಂದು ಮನವಿ ಮಾಡಿದಾಗ ಪ್ರತಿಪಕ್ಷಗಳಿಗೆ ಮಾತಿಲ್ಲದಂತಾಯಿತು.

ಮಾತಿಗೆ ಎದ್ದು ನಿಂತ ಪ್ರತಿಪಕ್ಷದ ನಾಯಕ ಆರ್ ಅಶೋಕ್, ಗೃಹಸಚಿವರು ಇದೇ ಮಾತುಗಳನ್ನು ನಿನ್ನೆಯೇ ಹೇಳಬಹುದಿತ್ತು. ಆದರೆ ನಮ್ಮನ್ನು ಸತಾಯಿಸಿ ಕಾಲಾಹರಣ ಮಾಡಲಾಗಿದೆ. ಸಂವಿಧಾನಬದ್ಧವಾದ ಸಭಾಧ್ಯಕ್ಷರ ಪೀಠಕ್ಕೆ ಅಗೌರವ ಆಗಿದೆ ಎಂಬುದಷ್ಟೇ ನಮ್ಮ ಕಳಕಳಿ. ಇದರಲ್ಲಿ ವೈಯಕ್ತಿಕ ವಿಚಾರಗಳಿಲ್ಲ. ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳು ಚರ್ಚೆಯಾಗಬೇಕೆಂಬುದು ನಮ್ಮ ಕಾಳಜಿ. ಕೂಗಾಡಿ ನಮ್ಮ ಗಂಟಲು ಒಣಗಿದೆ. ಸದನದ ಯಾವುದೇ ಕಲಾಪಗಳಲ್ಲೂ ತಾವು ಭಾಗವಹಿಸಲಾಗಿಲ್ಲ. ಸರ್ಕಾರ ನಿನ್ನೆ ಮಂಡಿಸಿದ ವಿವಿಧ ಮಸೂದೆಗಳಲ್ಲಿ ಜನರ ಮೇಲೆ 2500 ಕೋಟಿ ರೂ. ತೆರಿಗೆ ವಿಸಿದೆ. ಇದರ ಬಗ್ಗೆ ನಾವು ಪ್ರಸ್ತಾಪಿಸಬೇಕಿದೆ.ನಾವು ಧರಣಿಯನ್ನು ಹಿಂಪಡೆಯುತ್ತಿದ್ದೇವೆ. ಉತ್ತರ ಕರ್ನಾಟಕ ಭಾಗದ ಅಭಿವೃದ್ಧಿಗಳ ಕುರಿತು ಚರ್ಚೆಯನ್ನು ಆದ್ಯತೆ ಮೇರೆಗೆ ತೆಗೆದುಕೊಳ್ಳಬೇಕು. ಅಗತ್ಯವಾದರೆ ಪ್ರಶ್ನೋತ್ತರ ಸೇರಿದಂತೆ ಎಲ್ಲಾ ಕಲಾಪಗಳನ್ನೂ ಬದಿಗಿರಿಸಿ ಎಂದು ಸಲಹೆ ನೀಡಿದರು.



Join Whatsapp