ಬೆಂಗಳೂರು: ಸಮಾಜದ ಸ್ವಾಸ್ಥ್ಯ ಕದಡುವ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾಕ್ಕೆ ರಾಜ್ಯ ಸರ್ಕಾರ ತೆರಿಗೆ ವಿನಾಯಿತಿ ನೀಡಬಾರದು ಎಂದು ಕರ್ನಾಟಕ ರಣಧೀರ ಪಡೆ ಆಗ್ರಹಿಸಿದ್ದಾರೆ.
ದಿ ಕಾಶ್ಮೀರ್ ಫೈಲ್ ಎಂಬ ಸಿನಿಮಾ ಸಮಾಜದಲ್ಲಿ ಶಾಂತಿ ಕದಡಲು ಮಾಡಿರುವ ಹುನ್ನಾರವಷ್ಟೆ. ತೆರಿಗೆ ವಿನಾಯಿತಿ ಘೋಷಿಸಲು ಇದು ಯಾವುದೇ ಸಾಮಾಜಿಕ, ಸಾಂಸ್ಕೃತಿಕ ಕ್ರಾಂತಿ ಸಿನಿಮಾವಲ್ಲ. ಸುಳ್ಳು ಮತ್ತು ಅತಿರಂಜಿತ ಕತೆಯನ್ನು ಭೀಬತ್ಸವಾಗಿ ತೋರಿಸಿ ಜನರ ಮಧ್ಯೆ ಅಪನಂಬಿಕೆ ಹುಟ್ಟು ಹಾಕುವ ಸಿನಿಮಾಗೆ ತೆರಿಗೆ ವಿನಾಯಿತಿ ನೀಡುವುದು ಎಂದರೆ ಕನ್ನಡಿಗರ ತೆರಿಗೆ ಹಣಕ್ಕೆ ದೋಖಾ ಬಗೆಯುವುದು ಎಂದರ್ಥ. ಇಂತಹ ಕೃತ್ಯವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ರಾಜ್ಯ ಸರ್ಕಾರ ಮಾಡಕೂಡದು ಎಂದು ಆಗ್ರಹಿಸಿದ್ದಾರೆ.
ಕನ್ನಡ ಚಿತ್ರೋದ್ಯಮ ಈಗ ಸಂಕಷ್ಟದಲ್ಲಿದೆ. ಕೊರೋನಾ ನಂತರ ಕನ್ನಡ ಚಿತ್ರೋದ್ಯಮದ ಸಾವಿರಾರು ಕಾರ್ಮಿಕರು ಬದುಕಿಗಾಗಿ ಪರದಾಡುತ್ತಿದ್ದಾರೆ. ಕನ್ನಡ ಚಿತ್ರೋದ್ಯಮಕ್ಕೆ ಮಿಡಿಯದ ಮುಖ್ಯಮಂತ್ರಿಗಳು ಕರ್ನಾಟಕಕ್ಕೆ ಸಂಬಂಧಪಡದ ಕಾಶ್ಮೀರ್ ಫೈಲ್ ಸಿನಿಮಾಗೆ ಯಾಕೆ ಸ್ಪಂದಿಸಿದರು ಎಂಬುದು ಎಲ್ಲರಿಗೂ ಗೊತ್ತಿದೆ. ರಾಜ್ಯ ಸರ್ಕಾರದ ಪರೋಕ್ಷ ಹೈಕಮಾಂಡ್ ಆಗಿರುವ ಆರ್ ಎಸ್ ಎಸ್ ಮನವೊಲಿಸಲು ಮುಖ್ಯಮಂತ್ರಿಗಳು ಕನ್ನಡಿಗರ ಖಜಾನೆಯನ್ನು ತೂತು ಮಾಡಿದ್ದಾರೆ. ಈ ರೀತಿ ಕಿಡಿಗೇಡಿಗಳ ಸಿನಿಮಾಕ್ಕೆ ತೆರಿಗೆ ವಿನಾಯಿತಿ ನೀಡುವುದು ಅಕ್ಷಮ್ಯ ಎಂದು ಕರ್ನಾಟಕ ರಣಧೀರ ಪಡೆ ತಿಳಿಸಿದೆ.