ಬೆಂಗಳೂರು,ಆ 1: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸಂಪುಟದಲ್ಲಿ ಹೊಸ ಮುಖಗಳಿಗೆ ಆದ್ಯತೆ ನೀಡಲು ಚಿಂತನೆ ನಡೆಸಿರುವ ಬಿಜೆಪಿ ಹೈಕಮಾಂಡ್, ಹಿರಿಯ ಮುಖಂಡರನ್ನು ಪಕ್ಷ ಸಂಘಟನೆಗೆ ನಿಯೋಜಿಸಲು ಉದ್ದೇಶಿಸಿದೆ.
ಬಹು ಕಾಲದಿಂದ ಸಚಿವರಾಗಿ ಸೇವೆ ಸಲ್ಲಿಸಿರುವರನ್ನು ಪಕ್ಷ ಸಂಘಟನೆಗೆ ನಿಯೋಜಿಸುತ್ತಿದ್ದು, ಮುಂದಿನ ಚುನಾವಣೆಗೆ ಪಕ್ಷವನ್ನು ಪ್ರಬಲವಾಗಿ ಸಂಘಟಿಸಲು ಮುಂದಾಗಿದೆ.
ಬಸವರಾಜ ಬೊಮ್ಮಾಯಿ ನೇತೃತ್ವದ ಸಚಿವ ಸಂಪುಟ ರಚನೆಯಾಗುತ್ತಿದ್ದಂತೆ ಹಿರಿಯರಿಗೆ ಪಕ್ಷ ಸಂಘಟನೆಯ ದಾರಿ ತೋರಿಸಲಿದ್ದಾರೆ. ಅನುಭವವುಳ್ಳ ಹಿರಿಯ ನಾಯಕರಿಗೆ ಪಕ್ಷದ ಬಲ ಹೆಚ್ಚಿಸುವ ಜವಾಬ್ದಾರಿ ನೀಡಲು ಈಗಾಗಲೇ ದೆಹಲಿ ಮಟ್ಟದಲ್ಲಿ ಮಾತುಕತೆ ನಡೆಸಲಾಗಿದೆ.
ಬಿಜೆಪಿ ಉನ್ನತ ಮೂಲಗಳ ಪ್ರಕಾರ, ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಮಾಜಿ ಉಪಮುಖ್ಯಮಂತ್ರಿಗಳಾದ ಡಾ. ಸಿ.ಎನ್. ಅಶ‍್ವತ್ಥ ನಾರಾಯಣ, ಲಕ್ಷ್ಮಣ ಸವದಿ, ಮಾಜಿ ಸಚಿವರಾದ ಕೆ.ಎಸ್.ಈಶ್ವರಪ್ಪ, ಕೋಟಾ ಶ್ರೀನಿವಾಸ ಪೂಜಾರಿ ಮತ್ತಿತರ ಘಟಾನುಘಟಿ ನಾಯಕರುಗಳನ್ನು ಈ ಬಾರಿ ಸಂಪುಟಕ್ಕೆ ಸೇರಿಸಿಕೊಳ್ಳುತ್ತಿಲ್ಲ. ಇವರೆಲ್ಲರನ್ನೂ ಪಕ್ಷ ಸಂಘಟನೆಗೆ ಬಳಸಿಕೊಳ್ಳಲಾಗುತ್ತಿದೆ.
ಈ ಮಧ್ಯ ಬಸವರಾಜ ಬೊಮ್ಮಾಯಿ ಅವರು ಸಚಿವ ಸಂಪುಟ ರಚನೆಯನ್ನು ಅಂತಿಮಗೊಳಿಸಲು ಒಂದೆರಡು ದಿನಗಳಲ್ಲಿ ದೆಹಲಿಗೆ ತೆರಳುತ್ತಿದ್ದು, ಸಚಿವ ಸ್ಥಾನದ ಆಕಾಂಕ್ಷಿಗಳು ಮುಖ್ಯಮಂತ್ರಿ ಅವರ ಮೇಲೆ ಒತ್ತಡ ಹೇರುತ್ತಿದ್ದಾರೆ.
ಬಸವರಾಜ ಬೊಮ್ಮಾಯಿ ಅವರ ಮನೆಗೆ ಬೆಳಿಗ್ಗೆಯಿಂದಲೇ ಸಚಿವಾಕಾಂಕ್ಷಿ ಶಾಸಕರುಗಳು ಭೇಟಿ ನೀಡಿ ಸಚಿವ ಸ್ಥಾನ ನೀಡುವಂತೆ ಕೋರಿಕೆ ಸಲ್ಲಿಸುತ್ತಿದ್ದಾರೆ. ಶತಾಯ-ಗತಾಯ ಸಚಿವರಾಗಬೇಕು ಎಂಬ ಉಮೇದಿನಲ್ಲಿರುವ ಕೆಲ ಶಾಸಕರುಗಳು ಸಚಿವ ಪಟ್ಟಕ್ಕಾಗಿ ವರಿಷ್ಠರ ಮಟ್ಟದಲ್ಲೂ ಲಾಬಿ ನಡೆಸುತ್ತಿದ್ದಾರೆ.
ಮಾಜಿ ಸಚಿವರಾದ ವಿ. ಸೋಮಣ್ಣ, ಮುರುಗೇಶ್ ನಿರಾಣಿ, ಬಿ.ಸಿ. ಪಾಟೀಲ್, ಎಸ್.ಟಿ. ಸೋಮಶೇಖರ್, ಭೈರತಿ ಬಸವರಾಜು. ಶಿವನಗೌಡ ನಾಯಕ್, ಮಾಜಿ ಉಪಮುಖ್ಯಮಂತ್ರಿ ಅಶ್ವತ್ಥ ನಾರಾಯಣ, ಶಾಸಕರುಗಳಾದ ಕೆ.ಜಿ. ಬೋಪಯ್ಯ,, ಮಹೇಶ್ ಕುಮಟಹಳ್ಳಿ, ಮಾಜಿ ಸಚಿವ ಉಮೇಶ್ ಕತ್ತಿ ಸಹೋದರ ರಮೇಶ್ ಕತ್ತಿ ಮತ್ತಿತರ ದಂಡು ಲಾಬಿಯಲ್ಲಿ ತೊಡಗಿದೆ.
ಸಂಪುಟ ರಚನೆಯ ಸಂಬಂಧ ವರಿಷ್ಠರನ್ನು ಭೇಟಿ ಮಾಡಲು ನಾಳೆ ದೆಹಲಿಗೆ ತೆರಳುತ್ತಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ಬೆಳಿಗ್ಗೆಯೇ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪರವರನ್ನು ಭೇಟಿ ಮಾಡಿ ಚರ್ಚೆ ನಡೆಸಿದರು.
ಯಡಿಯೂರಪ್ಪರವರ ಅಧಿಕೃತ ನಿವಾಸ ಕಾವೇರಿಗೆ ತೆರಳಿದ ಬಸವರಾಜ ಬೊಮ್ಮಾಯಿ ಸುಮಾರು ಹೊತ್ತು ಯಡಿಯೂರಪ್ಪರವರ ಜತೆ ಪ್ರತ್ಯೇಕ ಮಾತುಕತೆ ನಡೆಸಿ ಸಂಪುಟ ರಚನೆ ಬಗ್ಗೆ ಅವರ ಸಲಹೆ-ಮಾರ್ಗದರ್ಶನ ಪಡೆದುಕೊಂಡರು ಎನ್ನಲಾಗಿದೆ.
ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಮುಖ್ಯಮಮಂತ್ರಿ ಅವರು, ಇಂದು ಇಲ್ಲ ನಾಳೆ ಸಂದೇಶ ಬರುವ ನಿರೀಕ್ಷೆ ಇದೆ. ಇದುವರೆಗೂ ಹೈಕಮಾಂಡ್‌ನಿಂದ ಸಂದೇಶ ಬಂದಿಲ್ಲ. ಯಾವಾಗ ಬೇಕಾದರು ಬರಬಹುದು ಎಂದರು.