ನವದೆಹಲಿ: ಉಕ್ರೇನ್ ಬಿಕ್ಕಟ್ಟು ಅಥವಾ ಕೋವಿಡ್- 19ರ ಕಾರಣದಿಂದ ಬಾಕಿಯಾಗಿರುವ ವಿದೇಶಿ ವೈದ್ಯಕೀಯ ಪದವೀದರರಿಗೆ ಭಾರತದಲ್ಲಿ ಇಂಟರ್ನ್ ಶಿಪ್ ಪೂರ್ಣಗೊಳಿಸಲು ಅವಕಾಶ ನೀಡುವುದಾಗಿ ರಾಷ್ಟ್ರೀಯ ವೈದ್ಯಕೀಯ ಆಯೋಗ (ಎನ್ಎಂಸಿ) ತಿಳಿಸಿದೆ.
‘ಕೋವಿಡ್ -19 ಅಥವಾ ಯುದ್ಧ ಮುಂತಾದ ಕಾರಣಗಳಿಂದ ಇಂಟರ್ನ್ ಶಿಪ್ ಪೂರ್ಣಗೊಳಿಸಲು ಸಾಧ್ಯವಾಗದೇ ಇರುವ ಕೆಲವು ವಿದೇಶಿ ವೈದ್ಯಕೀಯ ವಿದ್ಯಾರ್ಥಿಗಳು ಇಂಟರ್ನ್ ಶಿಪ್ ಅನ್ನು ಭಾರತದಲ್ಲಿ ಪೂರ್ಣಗೊಳಿಸಲು ಕೋರಿ ಸಲ್ಲಿಸಿರುವ ಅರ್ಜಿಯನ್ನು ಪರಿಗಣಿಸಲಾಗುವುದು’ ಎಂದು ಎಎಂಸಿ ತಿಳಿಸಿದೆ. ಇದಕ್ಕೆ ಯಾವುದೇ ಶುಲ್ಕ ವಿಧಿಸುವುದಿಲ್ಲ ಎಂದೂ ಹೇಳಿದೆ.
ಭಾರತದಲ್ಲಿ ಇಂಟರ್ನ್ ಶಿಪ್ ಪೂರ್ಣಗೊಳಿಸಲು ಅರ್ಜಿ ಸಲ್ಲಿಸುವ ಮೊದಲು ಅಭ್ಯರ್ಥಿಗಳು ವಿದೇಶಿ ವೈದ್ಯಕೀಯ ಪದವಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದರೆ ಅದನ್ನೇ ರಾಜ್ಯ ವೈದ್ಯಕೀಯ ಕೌನ್ಸಿಲ್ ಗಳು ಪರಿಗಣಿಸಬಹುದು ಎಂದು ಎನ್ಎಂಸಿ ತನ್ನ ಸುತ್ತೋಲೆಯಲ್ಲಿ ತಿಳಿಸಿದೆ.
ಇದರಿಂದ ನೂರಾರು ವೈದ್ಯಕೀಯ ವಿದ್ಯಾರ್ಥಿಗಳು ತಮ್ಮ ಕೋರ್ಸ್ ಅನ್ನು ಸ್ಥಳೀಯವಾಗಿ ಖಾಸಗಿ ಕಾಲೇಜುಗಳಲ್ಲಿ ಪೂರ್ಣಗೊಳಿಸಲು ಸಹಕಾರಿಯಾಗಲಿದೆ.