ಬಂಗಾಳದಲ್ಲಿ ಅಪರೇಷನ್ ಕಮಲಕ್ಕೆ ದಯನೀಯ ಸೋಲು : ಸ್ಪರ್ಧಿಸಿದ್ದ 148 ಅಭ್ಯರ್ಥಿಗಳಲ್ಲಿ ಗೆದ್ದವರು ಕೇವಲ 6 !

Prasthutha|

ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್‌ನಿಂದ (ಟಿಎಂಸಿ) ಆಪರೇಷನ್ ಕಮಲದ ಮೂಲಕ ಹಲವು ಶಾಸಕರು, ಸಂಸದರು ಮತ್ತು ಪಕ್ಷದ ಪ್ರಮುಖ ಮುಖಂಡರು ಬಿಜೆಪಿ ಸೇರಿಕೊಂಡಿದ್ದರು. ಅವರಲ್ಲಿ 148 ಜನರಿಗೆ ಬಿಜೆಪಿ ಟಿಕೆಟ್ ನೀಡಿತ್ತು. ಆದರೆ ಅವರಲ್ಲಿ ಗೆದ್ದವರು ಕೇವಲ ಆರು ಜನರು ಮಾತ್ರ ಎಂದು ದಿ ಪ್ರಿಂಟ್ ವರದಿ ಮಾಡಿದೆ.

- Advertisement -

ಟಿಎಂಸಿಯ ಪಕ್ಷದ 12  ಶಾಸಕರು ಸೇರಿದಂತೆ 148 ಪಕ್ಷಾಂತರಿಗಳಿಗೆ ಬಿಜೆಪಿ ಟಿಕೆಟ್ ನೀಡಿತ್ತು. ಬಿಜೆಪಿ ಕಾರ್ಯಕರ್ತರಲ್ಲಿ ಈ ಬಗ್ಗೆ ಅಸಮಾಧಾನ ವ್ಯಕ್ತವಾಗಿತ್ತು. ಈ ಪಕ್ಷಾಂತರಿಗಳ ಪೈಕಿ ಆರು ಮಂದಿ ಮಾತ್ರ ಗೆದ್ದಿದ್ದಾರೆ, ಇದು ಕೇಸರಿ ಪಕ್ಷದೊಳಗೆ ಹೆಚ್ಚು ಅಸಮಾಧಾನಕ್ಕೆ ಕಾರಣವಾಗಿದೆ. ಮಮತಾ ಬ್ಯಾನರ್ಜಿ ಅವರ ಮಾಜಿ ಆಪ್ತ ಸಹಾಯಕ ಸುವೇಂದು ಅಧಿಕಾರಿ ಮತ್ತು ಟಿಎಂಸಿ ಮಾಜಿ ಪ್ರಧಾನ ಕಾರ್ಯದರ್ಶಿ ಮುಕುಲ್ ರಾಯ್ ಗೆದ್ದ ಪ್ರಮುಖ ಪಕ್ಷಾಂತರಿಗಳು.

ಮಾಜಿ ಸಚಿವ ರಾಜೀಬ್ ಬ್ಯಾನರ್ಜಿ, ಹೌರಾದ ಮಾಜಿ ಮೇಯರ್ ರತೀಂದ್ರನಾಥ್ ಚಕ್ರವರ್ತಿ ಮತ್ತು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಮಾಜಿ ಮುಖ್ಯಸ್ಥ ಜಗಮೋಹನ್ ದಾಲ್ಮಿಯಾ ಅವರ ಪುತ್ರಿ ಬೈಶಾಲಿ ದಾಲ್ಮಿಯಾ ಬಿಜೆಪಿ ಸೇರಿ ಸ್ಪರ್ಧಿಸಿ ಸೋಲು ಅನುಭವಿಸಿದ್ದಾರೆ.

- Advertisement -

ಹೌರಾ ಜಿಲ್ಲೆಯಲ್ಲಿ ತನ್ನ ಮೂಲ ಕ್ಷೇತ್ರವಾದ ಡೊಮ್ಜುರ್ ಅನ್ನು 42,512 ಮತಗಳಿಂದ ಕಳೆದುಕೊಂಡಿದ್ದಲ್ಲದೆ, ಜಿಲ್ಲೆಯ ಎಲ್ಲಾ 16 ಸ್ಥಾನಗಳಲ್ಲಿ ಟಿಎಂಸಿಯೇ ಗೆದ್ದಿರುವುದು ಮಾಜಿ ಮೇಯರ್ ರವೀಂದ್ರನಾಥ್‌ರಿಗೆ ಭಾರಿ ಮುಖಭಂಗ ಮಾಡಿದೆ.

ಎರಡನೇ ಹಂತದ ಬಿಜೆಪಿ ಮುಖಂಡರು ಈ ಪಕ್ಷಾಂತರಿಗಳ ಬಗ್ಗೆ ಮೊದಲಿನಿಂದಲೂ ಅಸಮಾಧಾನ ಹೊಂದಿದ್ದರು. ಅಂತಹವರಿಗೆಲ್ಲ ಟಿಕೆಟ್ ನೀಡಿದಾಗಲೂ ಒಳಗೊಳಗೇ ಸಿಟ್ಟಾಗಿದ್ದರು. ಈಗ ಅವರೆಲ್ಲ ಸೋತ ನಂತರ ಪಕ್ಷದ ಎರಡನೇ ಹಂತದ ನಾಯಕರು ಮತ್ತು ತಳಮಟ್ಟದ ಕಾರ್ಯಕರ್ತರಲ್ಲಿ ಅಸಮಾಧಾನ ಭುಗಿಲೇಳುತ್ತಿದೆ ಎಂದು ಬಂಗಾಳ ಬಿಜೆಪಿಯ ಹಿರಿಯ ನಾಯಕರೊಬ್ಬರು ದಿ ಪ್ರಿಂಟ್‌ಗೆ ತಿಳಿಸಿದ್ದಾರೆ.

ಕನಿಷ್ಠ 95% ಪಕ್ಷಾಂತರಿಗಳು ಸೋತಿದ್ದಾರೆ. ಇದಕ್ಕಾಗಿಯೇ ನಾವು ಪಕ್ಷಾಂತರಿಗಳನ್ನು ನಮ್ಮ ಪಕ್ಷಕ್ಕೆ ತೆಗೆದುಕೊಳ್ಳುವ ನಿರ್ಧಾರವನ್ನು ವಿರೋಧಿಸಿದ್ದೆವು. ಪಕ್ಷವು ತೃಣಮೂಲ-ಬಿ ಟೀಂ ರೀತಿ  ಕಾಣುತ್ತದೆ ಎಂದು ಎಚ್ಚರಿಸಿದ್ದೆವು” ಎಂದು ಅವರು ಹೇಳಿದ್ದಾರೆ.

“ಬಿಜೆಪಿಯ ಅನೇಕ ಹಿರಿಯ ನಾಯಕರಿಗೆ ಟಿಕೆಟ್ ಸಿಗಲಿಲ್ಲ, ಆದರೆ ಪಕ್ಷಾಂತರ ಮಾಡಿದವರಿಗೆ ಅವಕಾಶ ನೀಡಲಾಗಿತು. ಪಕ್ಷವು ತನ್ನ ಕಾರ್ಯಕರ್ತರ ಮಾತನ್ನು ಆಲಿಸಲೇ ಇಲ್ಲ. ಹೀಗಾಗಿ ಫಲಿತಾಂಶದ ಈ ಆಘಾತ ಸಹಜವಾಗಿಯೇ ಸಂಭವಿಸಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.

Join Whatsapp