ಆಪರೇಷನ್‌‌ ಕಮಲ: ಹಾವೇರಿ ನಗರಸಭೆ `ಬಿಜೆಪಿ’ ತೆಕ್ಕೆಗೆ

Prasthutha|

- Advertisement -

ಕೈ’ನ 6 ಸದಸ್ಯರು ಗೈರು, ಬಹುಮತವಿದ್ದರೂ ಕಾಂಗ್ರೆಸ್‌ಗೆ ಭಾರೀ ಮುಖಭಂಗ..!

ಹಾವೇರಿ: ಹಾವೇರಿ ನಗರಸಭೆಯಲ್ಲಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಚುನಾವಣೆ ಇಂದು ನಡೆಯಿತು.

- Advertisement -

ಕಾಂಗ್ರೆಸ್ ಬಹುಮತ ಇದ್ದರೂ, 6 ಕಾಂಗ್ರೆಸ್ ಸದಸ್ಯರು ಗೈರಾಗಿದ್ದು ಬಿಜೆಪಿ ಬೆಂಬಲಿತ ಸದಸ್ಯರು ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗಿದ್ದಾರೆ

ಹಾವೇರಿ ನಗರಸಭೆಯ ಅಧ್ಯಕ್ಷ ಸ್ಥಾನಕ್ಕೆ ಶಶಿಕಲಾ ರಾಮು ಮಾಳಗಿ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಮಲ್ಲಿಕಾರ್ಜುನ ಸಾತೇನಹಳ್ಳಿ ಕೈ ಎತ್ತುವ ಮೂಲಕ ಬಹುಮತದ ಆಧಾರದ ಮೇಲೆ ಚುನಾಯಿತರಾದರು.

ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮತ್ತು ಉಪಾಧ್ಯಕ್ಷ ಸ್ಥಾನ ಹಿಂದುಳಿದ `ಬಿ’ವರ್ಗಕ್ಕೆ ಮೀಸಲಾಗಿತ್ತು. ಈ ಹಿನ್ನೆಲೆಯಲ್ಲಿ ಬುಧವಾರ ನಡೆದ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳ ಚುನಾವಣೆಯಲ್ಲಿ ಪಕ್ಷೇತರರೇ ಬಿಜೆಪಿ ಬೆಂಬಲದೊಂದಿಗೆ ಅಧಿಕಾರ ಹಿಡಿದರು.

ಒಟ್ಟು 31 ಸದಸ್ಯ ಬಲದ ನಗರಸಭೆಯಲ್ಲಿ ಆಡಳಿತಾರೂಢ ಕಾಂಗ್ರೆಸ್ ಬೆಂಬಲಿತ 13 ಜನ, ಬಿಜೆಪಿ ಬೆಂಬಲಿತ 9 ಜನ ಮತ್ತು ಪಕ್ಷೇತರರು 6 ಸ್ಥಾನಗಳಲ್ಲಿ ಗೆಲುವು ಕಂಡಿದ್ದರು. ಸಂಸದ, ಶಾಸಕ ಹಾಗೂ ವಿಧಾನ ಪರಿಷತ್ ಸದಸ್ಯರ ಮತಗಳು ಸೇರಿ ಒಟ್ಟು 34 ಮತಗಳಿದ್ದವು. ಈ ಪೈಕಿ ಶಾಸಕ ರುದ್ರಪ್ಪ ಲಮಾಣಿ ಮತ್ತು ಎಂಎಲ್‌ಸಿ ಸಲೀಂ ಅಹ್ಮದ್ ಕಾಂಗ್ರೆಸ್‌ನವರಾದರೆ, ಸಂಸದ ಬಸವರಾಜ ಬೊಮ್ಮಾಯಿ ಬಿಜೆಪಿಯವರು.

ಪಕ್ಷಗಳ ಬಲಾ ಬಲ ನೋಡಿದಲ್ಲಿ 10 ಬಿಜೆಪಿ, 15 ಕಾಂಗ್ರೆಸ್ ಮತ್ತು 7 ಸ್ಥಾನಗಳಲ್ಲಿ ಪಕ್ಷೇತರರು ಇದ್ದು, ಪಕ್ಷೇತರರೇ ನಿರ್ಣಾಯಕರಾಗಿದ್ದರು. ಆದರೆ ಕಾಂಗ್ರೆಸ್‌ನ 6 ಜನ ಸದಸ್ಯರು ಚುನಾವಣೆಗೆ ಗೈರಾಗುವ ಮೂಲಕ ನಿರಾಯಾಸವಾಗಿ ಗೆಲುವನ್ನು `ಬಿಜೆಪಿ ಬೆಂಬಲಿತ’ರಿಗೆ ನೀಡಿದಂತಾಗಿದೆ.

ಕಾಂಗ್ರೆಸ್ ನ ರೇಣುಕಾ ರವಿ ಪುತ್ರನ್ ಕೇವಲ 11 ಮತಗಳಿಸಿದರೆ, ಬಿಜೆಪಿ ಬೆಂಬಲಿತ ಶಶಿಕಲಾ ರಾಮು ಮಾಳಗಿ 17 ಮತಗಳನ್ನು ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್‌ನಿಂದ ಪೂಜಾ ಬಸಯ್ಯ ಹಿರೇಮಠ 11 ಮತಗಳನ್ನು ಪಡೆದರೆ, ಬಿಜೆಪಿ ಬೆಂಬಲಿತ ಮಲ್ಲಿಕಾರ್ಜುನ ಸಾತೇನಹಳ್ಳಿ 17 ಮತಗಳನ್ನು ಪಡೆಯುವ ಮೂಲಕ ಗೆಲುವಿನ ನಗೆ ಬೀರಿದರು.



Join Whatsapp