ಮಂಗಳೂರು, ಆಗಸ್ಟ್ 29 : ಸೋಶಿಯಲ್ ಡೆಮೊಕ್ರಾಟಿಕ್ ಪಾರ್ಟಿ ಆಫ್ ಇಂಡಿಯಾ ಬಜಾಲ್ ವಾರ್ಡ್ ಸಮಿತಿ ವತಿಯಿಂದ ಮಾಹಿತಿ ಮತ್ತು ಸೇವಾ ಕೇಂದ್ರ ಉದ್ಘಾಟನಾ ಕಾರ್ಯಕ್ರಮವು ವಾರ್ಡ್ ಸಮಿತಿಯ ಅಧ್ಯಕ್ಷರಾದ ಕಬೀರ್ ಬಜಾಲ್ ರವರ ಅಧ್ಯಕ್ಷತೆಯಲ್ಲಿ ಇಂದು ಬಜಾಲ್ ಕಲ್ಲಕಟ್ಟೆಯಲ್ಲಿ ನಡೆಯಿತು.
ಮಾಹಿತಿ ಮತ್ತು ಸೇವಾ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದ ಎಸ್ಡಿಪಿಐ ಜಿಲ್ಲಾಧ್ಯಕ್ಷರಾದ ಅಥಾವುಲ್ಲಾ ಜೋಕಟ್ಟೆಯವರು ನಮ್ಮ ಪಕ್ಷವು ಕೇವಲ ರಾಜಕೀಯಕ್ಕೆ ಸೀಮಿತವಾಗಿರದೆ ಜನಸೇವೆಯನ್ನೇ ಮೂಲವಾಗಿರಿಸಿಕೊಂಡು ಕಾರ್ಯ ನಿರ್ವಹಿಸುತ್ತಿದೆ ಎಂಬುದರ ಸ್ಪಷ್ಟ ನಿದರ್ಶನವಾಗಿದೆ ಈ ಮಾಹಿತಿ ಕೇಂದ್ರದ ಲೋಕಾರ್ಪಣೆ. ಪಕ್ಷದ ಭಯ ಮುಕ್ತ ಸ್ವಾತಂತ್ರ್ಯ, ಹಸಿವು ಮುಕ್ತ ಎಂಬ ಘೋಷಣೆಯು ದೇಶದಲ್ಲಿ ಒಂದು ರಾಜಕೀಯ ಕ್ರಾಂತಿಯನ್ನು ಸೃಷ್ಟಿಸಲಿದೆ ಎಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಎಸ್ಡಿಪಿಐ ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ ಮಂಡಳಿ ಸದಸ್ಯರಾದ ರಿಯಾಝ್ ಫರಂಗಿಪೇಟೆಯವರು ಮಾತನಾಡಿ ಜನಸೇವೆಯನ್ನೇ ಗುರಿಯಾಗಿಸಿಕೊಂಡು ಮುನ್ನುಗ್ಗುತ್ತಿರುವ ಎಸ್ಡಿಪಿಐ ಪಕ್ಷವು ದ.ಕ ಜಿಲ್ಲೆಯಲ್ಲಿ 100 ಮಾಹಿತಿ ಮತ್ತು ಸೇವಾ ಕೇಂದ್ರಗಳ ಸ್ಥಾಪನೆಯ ಗುರಿಯೊಂದಿಗೆ ಸರಕಾರದ ಯೋಜನೆಗಳನ್ನು ನೇರವಾಗಿ ಜನರಿಗೆ ತಲುಪಿಸುವ ಒಂದು ಸೇತುವೆಯಾಗಿ ಕಾರ್ಯ ನಿರ್ವಹಿಸಲಿದೆ ಎಂದು ತಿಳಿಸಿದರು ಹಾಗೂ ದೇಶದಲ್ಲಿ ಅಭದ್ರತೆಯ ಆತಂಕ ಸೃಷ್ಟಿಸುವುದರೊಂದಿಗೆ ದೇಶವನ್ನು ಮಾರಾಟ ಮಾಡುವಷ್ಟರ ಮಟ್ಟಿಗೆ ಕಲುಷಿತಗೊಂಡಿರುವ ರಾಜಕೀಯವನ್ನು ಸರಿಪಡಿಸಬೇಕಾದರೆ ಸಂಘಪರಿವಾರದ ಬ್ರೈನ್ ವಾಶ್ ಗೆ ಬಲಿಯಾಗಿ ದಾರಿ ತಪ್ಪಿರುವ ನೈಜ ಹಿಂದೂಗಳನ್ನು ಬಿಜೆಪಿಯಿಂದ ದೂರಸರಿಸುವ ಕೆಲಸವನ್ನು ದೇಶದ ಯುವ ಜನತೆಯು ಒಟ್ಟಾಗಿ ಮಾಡಿದಾಗ ಮಾತ್ರ ದೇಶದ ರಕ್ಷಣೆ ಸಾಧ್ಯ. ಆದ್ದರಿಂದ ಈ ಮೂಲಕ ನಾವೆಲ್ಲರೂ ಒಟ್ಟಾಗಿ ಬಿಜೆಪಿಯನ್ನು ಅಧಿಕಾರದಿಂದ ಕೆಳಗಿಳಿಸಲು ಶ್ರಮಿಸಬೇಕು ಎಂದು ಅವರು ಕರೆ ಕೊಟ್ಟರು.
ಕಾರ್ಯಕ್ರಮದಲ್ಲಿ ಸ್ಥಳೀಯ ಮಸೀದಿಯ ಸದರ್ ಮುಅಲ್ಲಿಂ ಶೆರೀಫ್ ಸಅದಿಯವರು ಪ್ರಾರ್ಥನೆ ನೆರವೇರಿಸಿದರು,ಮುಖ್ಯ ಅತಿಥಿಗಳಾಗಿ ಕ್ರಿಯೇಟಿವ್ ಫೌಂಡೇಶನ್ ಇದರ ನಿರ್ದೇಶಕರಾದ ಅಕ್ಬರ್ ಅಲಿ, ಎಸ್ಡಿಪಿಐ ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರ ಅಧ್ಯಕ್ಷರಾದ ಸುಹೇಲ್ ಖಾನ್, SDTU ದ.ಕ ಜಿಲ್ಲಾ ಅಧ್ಯಕ್ಷರಾದ ಖಾದರ್ ಫರಂಗಿಪೇಟೆ, ಹಿರಿಯರಾದ ಅಬ್ದುಲ್ ರಝಾಕ್ ಮತ್ತು ಇತರರು ಉಪಸ್ಥಿತರಿದ್ದರು.