ನಾಳೆಯಿಂದ 24 ಗಂಟೆ ದೇಶಾದ್ಯಂತ ಸರ್ಕಾರಿ-ಖಾಸಗಿ ಆಸ್ಪತ್ರೆಗಳಲ್ಲಿ ಒಪಿಡಿ, ಶಸ್ತ್ರಚಿಕಿತ್ಸೆಗಳು ಬಂದ್

Prasthutha|

ನವದೆಹಲಿ: ಕೋಲ್ಕತ್ತಾದ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದ್ದ ವೈದ್ಯೆಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದು, ವೈದ್ಯರ ಪ್ರತಿಭಟನೆಗೆ ಬೆಂಬಲ ಸೂಚಿಸಿದ ಭಾರತೀಯ ವೈದ್ಯಕೀಯ ಸಂಘ (IMA), ಆಗಸ್ಟ್ 17ರಿಂದ 24 ಗಂಟೆಗಳ ಕಾಲ ದೇಶಾದ್ಯಂತ ಸರ್ಕಾರಿ, ಖಾಸಗಿ ಮತ್ತು ಕಾರ್ಪೊರೇಟ್ ಆಸ್ಪತ್ರೆಗಳಲ್ಲಿ ಎಲ್ಲಾ ಒಪಿಡಿಗಳು ಮತ್ತು ಶಸ್ತ್ರಚಿಕಿತ್ಸೆಗಳು ಕಾರ್ಯನಿರ್ವಹಿಸುವುದಿಲ್ಲ ಎಂದು ಹೇಳಿದೆ.

- Advertisement -

ಕಾರ್ಪೊರೇಟ್ ಆಸ್ಪತ್ರೆಗಳಲ್ಲಿ ಕೆಲಸ ಮಾಡುವ ವೈದ್ಯರಿಗೆ ಶನಿವಾರ ಬೆಳಿಗ್ಗೆ 6ರಿಂದ ಭಾನುವಾರ ಬೆಳಿಗ್ಗೆ 6ರವರೆಗೆ ಒಪಿಡಿ ಮತ್ತು ಶಸ್ತ್ರಚಿಕಿತ್ಸೆಗಳಿಂದ 24 ಗಂಟೆಗಳ ಕಾಲ ತಮ್ಮ ಸೇವೆಗಳನ್ನು ಹಿಂಪಡೆಯುವಂತೆ ಮನವಿ ಮಾಡಿದ್ದೇವೆ. ಆಸ್ಪತ್ರೆಗಳನ್ನು ಸುರಕ್ಷಿತ ವಲಯಗಳಾಗಿ ಘೋಷಿಸಲು ಮತ್ತು ಆರೋಗ್ಯ ಕಾರ್ಯಕರ್ತರಿಗೆ ಕೇಂದ್ರೀಯ ರಕ್ಷಣಾ ಕಾಯಿದೆಯನ್ನು ತರಲು ಸರ್ಕಾರವನ್ನು ನಾವು ಬಯಸುತ್ತೇವೆ ಎಂದು ಈ ಬಗ್ಗೆ ಮಾತನಾಡಿದ ಭಾರತೀಯ ವೈದ್ಯಕೀಯ ಸಂಘದ ರಾಷ್ಟ್ರೀಯ ಅಧ್ಯಕ್ಷ ಡಾ.ಆರ್.ವಿ ಅಶೋಕನ್ ಹೇಳಿದ್ದಾರೆ.

ಕೋಲ್ಕತ್ತಾದ ಸರ್ಕಾರಿ ಸ್ವಾಮ್ಯದ ಆರ್‌ಜಿ ಕರ್ ವೈದ್ಯಕೀಯ ಕಾಲೇಜಿನಲ್ಲಿ ನಡೆದ ವೈದ್ಯೆಯ ಅತ್ಯಾಚಾರ ಮತ್ತು ಕೊಲೆಗೆ ಸ್ಥಳೀಯರು ಮತ್ತು ಕಿರಿಯ ವೈದ್ಯರು, ಇಂಟರ್ನ್‌ಗಳು ಮತ್ತು ವೈದ್ಯಕೀಯ ವಿದ್ಯಾರ್ಥಿಗಳು ತಮ್ಮ ಪ್ರತಿಭಟನೆಯನ್ನು ಮತ್ತಷ್ಟು ತೀವ್ರಗೊಳಿಸಿದ್ದಾರೆ. ಅಲ್ಲದೆ, ಕೋಲ್ಕತ್ತಾ ಆಸ್ಪತ್ರೆಯಲ್ಲಿ ವೈದ್ಯರ ಮೇಲೆ ಗೂಂಡಾಗಳು ನಡೆಸಿದ ಮಧ್ಯರಾತ್ರಿಯ ದಾಳಿಯ ವಿಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಐಎಂಎ ಕೂಡ ವಿಧ್ವಂಸಕ ಕೃತ್ಯವನ್ನು ಖಂಡಿಸಿ ಹೇಳಿಕೆ ನೀಡಿದ್ದು, ಇದು ಅರಾಜಕತೆಯತ್ತ ಬೊಟ್ಟು ಮಾಡುತ್ತದೆ ಎಂದು ಹೇಳಿದೆ.

- Advertisement -

ಈ ಮಧ್ಯೆ 3.5 ಲಕ್ಷ ಸದಸ್ಯರನ್ನು ಹೊಂದಿರುವ ದೇಶದ ಅತಿದೊಡ್ಡ ವೈದ್ಯರ ಸಂಘಟನೆಯಾದ ಐಎಂಎ ಪ್ರತಿಭಟನೆಗೆ ಬೆಂಬಲ‌ ವ್ಯಕ್ತಪಡಿಸಿ, ಆಗಸ್ಟ್ 17ರಂದು ರಾಷ್ಟ್ರವ್ಯಾಪಿ ಮುಷ್ಕರವನ್ನು ಘೋಷಿಸಿದೆ.



Join Whatsapp