ಮಂಗಳೂರು: ಜುಲೈ 3ನೇ ವಾರದಲ್ಲಿ ರಾಜ್ಯದ ವಿವಿಧ ಚಾರಣ ಪಥಗಳಿಗೆ ಆನ್ ಲೈನ್ ಮೂಲಕ ಟಿಕೆಟ್ ಬುಕ್ಕಿಂಗ್ ಮಾಡುವ ವ್ಯವಸ್ಥೆಯನ್ನು ಜಾರಿಗೊಳಿಸಲಾಗುವುದು ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ್ ಬಿ. ಖಂಡ್ರೆ ತಿಳಿಸಿದ್ದಾರೆ.
ಮಂಗಳೂರಿನ ಅರಣ್ಯ ಸಂರಕ್ಷಣಾಧಿಕಾರಿಗಳ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಜನವರಿ 26ರಂದು ಕುಮಾರಪರ್ವತಕ್ಕೆ ಸಾವಿರಾರು ಚಾರಣಿಗರು ಒಂದೇ ದಿನ ಲಗ್ಗೆ ಇಟ್ಟು ಗೊಂದಲ ಉಂಟಾದ ಹಿನ್ನೆಲೆಯಲ್ಲಿ ಸ್ಥಗಿತಗೊಳಿಸಲಾದ ಚಾರಣಕ್ಕೆ ಈ ಆಗಸ್ಟ್ ನಿಂದ ಮರು ಚಾಲನೆ ನೀಡಲಾಗುವುದು ಎಂದು ತಿಳಿಸಿದರು.
ಸಾಮಾನ್ಯವಾಗಿ ಮಳೆಗಾಲದಲ್ಲಿ ಯಾವುದೇ ಚಾರಣ ಪಥಕ್ಕೆ ಪ್ರವೇಶ ನಿರಾಕರಿಸಲಾಗುತ್ತದೆ. ಕಾರಣ ಚಾರಣಿಗರು ಅಪಾಯಕ್ಕೆ ಈಡಾಗುವ ಸಂಭವ ಹೆಚ್ಚಾಗಿರುತ್ತದೆ ಜೊತೆಗೆ ಇಲ್ಲಿನ ಜೀವರಾಶಿ ಮತ್ತು ಮೊಳಕೆಯೊಡೆಯುವ ಸಸ್ಯರಾಶಿಗೂ ತೊಂದರೆ ಆಗುತ್ತದೆ ಹೀಗಾಗಿ ಆಗಸ್ಟ್ ನಿಂದ ಚಾರಣಕ್ಕೆ ಮರು ಚಾಲನೆ ನೀಡುವುದಾಗಿ ತಿಳಿಸಿದರು