ಆನ್ ಲೈನ್ ಮುಖಾಂತರ ಕೋಟ್ಯಂತರ ರೂ. ವಂಚನೆ | ಕೇರಳ ಮೂಲದ ಪತಿಯ ಜೊತೆ ಚೀನಿ ಪತ್ನಿಯ ಬಂಧನ

Prasthutha: July 8, 2021

ಬೆಂಗಳೂರು : ಪವರ್ ಬ್ಯಾಂಕ್ ಹಾಗೂ ಸನ್ ಫ್ಯಾಕ್ಟರಿ ಹೆಸರಿನ ಆನ್‌ಲೈನ್ ಮೊಬೈಲ್‌ ಅಪ್ಲಿಕೇಷನ್ಗಳ ಮೂಲಕ ಕೋಟ್ಯಂತರ ರೂ. ಹೂಡಿಕೆ ಮಾಡಿಕೊಂಡು ವಂಚನೆ ನಡೆಸಿ ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿಯನ್ನು ಬಂಧಿಸಿ ಆತನ ಚೀನಿ ಪತ್ನಿಯನ್ನು ವಶಕ್ಕೆ ಪಡೆದುಕೊಂಡಿರುವ ತುಮಕೂರು ಸೈಬರ್ ಕ್ರೈಂ ಪೊಲೀಸರು ತೀವ್ರ ವಿಚಾರಣೆ ಕೈಗೊಂಡಿದ್ದಾರೆ.

ಕೇರಳ ಮೂಲದ ಅನಸ್ ಅಹಮ್ಮದ್ ಬಂಧಿತ ಆರೋಪಿಯಾಗಿದ್ದು ಆತನ ಪತ್ನಿ ಚೀನಾ ಪ್ರಜೆ ಹೂ ಕ್ಸಿಯೊಲಿನ್ ವಶಕ್ಕೆ‌‌ ಪಡೆದುಕೊಂಡು ವಿಚಾರಣೆ ನಡೆಸಲಾಗುತ್ತಿದೆ.ನಾಗೇಶ್ ಎಂಬುವರಿಗೆ ಹಣ ಹೂಡಿಕೆ ಮಾಡಿದರೆ ದುಪ್ಪಟ್ಟು ಹಣ ನೀಡುವುದಾಗಿ ಹೇಳಿ 44 ಸಾವಿರ ರೂ. ಪಾವತಿಸಿಕೊಂಡು ಕೆಲ ದಿನಗಳ ಬಳಿಕ ಗೂಗಲ್‌ ಪ್ಲೇ ಸ್ಟೋರ್ನಲ್ಲಿ ಪವರ್ ಬ್ಯಾಂಕ್ ಆ್ಯಪ್ ಡಿಲಿಟ್ ಮಾಡಿ ಅಸಲು ಹಣ ನೀಡದೆ ವಂಚಿಸಿದ ಆರೋಪದಡಿ ನೀಡಿದ ದೂರಿನ ಸಂಬಂಧ ಪ್ರಕರಣ ದಾಖಲಿಸಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ.

ದಿನ ಹಾಗೂ ವಾರದ ಲೆಕ್ಕದಲ್ಲಿ ಹಣ ಹೂಡಿಕೆ ಮಾಡಿದರೆ ಬಡ್ಡಿ ಸಮೇತ ದುಪ್ಪಟ್ಟು ಹಣ ನೀಡುವುದಾಗಿ ಹೇಳಿ ಸಾವಿರಾರು ಜನರಿಂದ ಸುಮಾರು 290 ಕೋಟಿ‌ ರೂ. ಹೂಡಿಕೆ ಮಾಡಿಸಿ ವಂಚಿಸಿದ ಪ್ರಕರಣವಿದು. ‘ಕೇರಳ‌ ಮೂಲದ‌ ಅನಸ್, ಪವರ್ ಬ್ಯಾಂಕ್ ಸೇರಿ ವಿವಿಧ ಆನ್ ಲೈನ್ ಮೊಬೈಲ್ ಅಪ್ಲಿಕೇಷನ್ಗಳಿಂದ ಹೂಡಿಕೆ ಮಾಡಿಕೊಂಡ ಹಣವನ್ನು ಅಕ್ರಮವಾಗಿ ಹಣ ವರ್ಗಾವಣೆ ಹಾಗೂ ಹವಾಲಾ ದಂಧೆಯಲ್ಲಿ ತೊಡಗಿಸಿಕೊಳ್ಳುತ್ತಿದ್ದ.ಚೀನಾದ ಹವಾಲಾ ದಂಧೆಕೋರರ ಸಂಪರ್ಕದಲ್ಲಿದ್ದು, ಅಕ್ರಮ ಹಣ ವರ್ಗಾವಣೆಗಾಗಿ ಬುಲ್‌ಫಿನ್ಚ್ ಸಾಫ್ಟ್‌ವೇರ್, ಹೆಚ್ ಆ್ಯಂಡ್ ಎಸ್ ವೆಂಚರ್ಸ್, ಕ್ಲಿ ಪ್ಪೊರ್ಡ್ ವೆಂಚರ್ಸ್ ಹಾಗೂ ಬಯೋಸಾಫ್ಟ್ ವೆಂಚರ್ಸ್ ಕಂಪನಿ ತೆರೆದಿದ್ದ. ಈತನಿಗೆ ಪತ್ನಿ ಹೂ ಕ್ಸಿಯೊಲಿನ್ ಸಾಥ್ ನೀಡಿದ್ದಳು.

11 ಮಂದಿ ಬಂಧನ :
ಕಳೆದ ತಿಂಗಳು ರೇಜರ್ ಪೇ ಸಾಫ್ಟ್‌ವೇರ್ ನೀಡಿದ ದೂರಿನ ಮೇರೆಗೆ ಚೀನಾ ಹಾಗೂ ಟಿಬೇಟಿಯನ್ ಪ್ರಜೆ ಸೇರಿದಂತೆ 11 ಮಂದಿ ಆರೋಪಿಗಳನ್ನು ಸಿಐಡಿ ಪೊಲೀಸರು ಬಂಧಿಸಿದ್ದರು. ಪ್ರಕರಣ ತನಿಖೆ ಹೈಕೋರ್ಟ್ ತಡೆಯಾಜ್ಞೆ ಹಿನ್ನೆಲೆಯಲ್ಲಿ ಪ್ರಮುಖ ಆರೋಪಿಯನ್ನು ಸಿಐಡಿ ಬಾಡಿ ವಾರೆಂಟ್ ಪಡೆದು ವಿಚಾರಣೆ ನಡೆಸಲು ಅಸಾಧ್ಯವಾಗಿದೆ. ಇನ್ನೊಂದೆಡೆ ತಡೆಯಾಜ್ಞೆ ತೆರವುಗೊಳಿಸಲು ಸಿಐಡಿ ಪೊಲೀಸರು ಕಾನೂನು ಹೋರಾಟ ನಡೆಸುತ್ತಿದ್ದಾರೆ.

ದೇಶದಲ್ಲಿ ಒಟ್ಟಾರೆ 250 ಪ್ರಕರಣಗಳು ದಾಖಲಾಗಿದ್ದು 20ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಲಾಗಿದೆ. ಈ ಪ್ರಕರಣವು ವಿದೇಶಿ ಪ್ರಜೆಗಳು ಮತ್ತು ಕಂಪೆನಿಗಳನ್ನು ಒಳಗೊಂಡಿರುವುದರಿಂದ ರಾಷ್ಟ್ರೀಯ ಏಜೆನ್ಸಿಗಳಾದ ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (ಸಿಬಿಐ), ಇಂಟಲಿಜೆನ್ಸ್ ಬ್ಯೂರೋ (ಐಬಿ), ಜಾರಿ ನಿರ್ದೇಶನಾಲಯ (ಇಡಿ) ತನಿಖೆ ನಡೆಸುತ್ತಿದೆ.

ನಿಮ್ಮ ಚಂದಾ ಹಣ ಪಾವತಿಸಲು ಈ ಕೆಳಗಿನ ಬಟನ್ ಮೇಲೆ ಕ್ಲಿಕ್ ಮಾಡಿ.

ಜನಪರ ಪತ್ರಿಕೋದ್ಯಮವನ್ನು ಬೆಂಬಲಿಸಿ
ಪ್ರಸ್ತುತದ ಬೆಳವಣಿಗೆಯಲ್ಲಿ ಪಾಲುದಾರರಾಗಿ
ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸದಾ ಮಿಡಿಯುತ್ತಾ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗುತ್ತಾ ಮಾಧ್ಯಮ ಲೋಕದಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಯಾವತ್ತೂ ಇರಲಿ. ಪ್ರಸ್ತುತಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿಸಬಹುದು.

ಧನ್ಯವಾದಗಳು

ಟಾಪ್ ಸುದ್ದಿಗಳು

ವಿಶೇಷ ವರದಿ