ಉಡುಪಿ: ಹಿಜಾಬ್ ಹಾಕಿ ಬರುವ ವಿದ್ಯಾರ್ಥಿನಿಯರಿಗೆ ಆನ್ ಲೈನ್ ನಲ್ಲಿ ಪಾಠ ಪ್ರವಚನ ಕೇಳಲು ಪರ್ಯಾಯ ವ್ಯವಸ್ಥೆ ಮಾಡಲಾಗುವುದು ಎಂದು ಉಡುಪಿ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನ ಅಭಿವೃದ್ಧಿ ಸಮಿತಿಯ ಅಧ್ಯಕ್ಷರೂ ಆಗಿರುವ ಶಾಸಕ ರಘುಪತಿ ಭಟ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನಲ್ಲಿ ಹಿಂದಿನಂತೆಯೇ ವಿದ್ಯಾರ್ಥಿನಿಯರು ಹಿಜಾಬ್ ಹಾಕದೆ ಸಮವಸ್ತ್ರ ಧರಿಸಿ ತರಗತಿಗೆ ಹಾಜರಾಗಬೇಕು. ಈ ನಿಯಮವನ್ನು ಒಪ್ಪದಿದ್ದರೆ ಪ್ರತಿಭಟನಾ ನಿರತ ವಿದ್ಯಾರ್ಥಿನಿಯರಿಗೆ ಆನ್ ಲೈನ್ ನಲ್ಲಿ ಪಾಠ ಪ್ರವಚನಕ್ಕೆ ಪರ್ಯಾಯ ವ್ಯವಸ್ಥೆ ಮಾಡಲಾಗುವುದು. ವಿದ್ಯಾರ್ಥಿನಿಯರು ಹಿಜಾಬ್ ಧರಿಸದೆ ತರಗತಿಗೆ ಹಾಜರಾಗಬೇಕು. ಇಲ್ಲವಾದರೆ, ತರಗತಿಗೆ ಪ್ರವೇಶ ಇಲ್ಲ. ಆನ್ ಲೈನ್ನಲ್ಲಿ ಪಾಠ ಕೇಳಬಹುದು. ಪರೀಕ್ಷೆಗೂ ಹಾಜರಾಗಬಹುದು ಎಂದರು.
ಯಾರದ್ದೋ ಕುಮ್ಮಕ್ಕಿನಿಂದ ಮಕ್ಕಳ ಹಾಗೂ ಕಾಲೇಜಿನ ಭವಿಷ್ಯವನ್ನು ಹಾಳುಮಾಡಬಾರದು. ಪ್ರತಿಭಟನಾ ನಿರತ ವಿದ್ಯಾರ್ಥಿನಿಯರು ಹಿಂದಿನಂತೆಯೇ ಸಮವಸ್ತ್ರ ಧರಿಸಿ ಕಾಲೇಜಿಗೆ ಬರುವಂತೆ ಮನವೊಲಿಸಬೇಕು ಎಂದು ಪೋಷಕರಿಗೆ ಹಾಗೂ ಮುಸ್ಲಿಂ ಸಮುದಾಯದ ಮುಖಂಡರಿಗೆ ಶಾಸಕರು ಮನವಿ ಮಾಡಿದರು.