ಜೆಡಿಎಸ್ ಅಧಿಕಾರಕ್ಕೆ ಬಂದರೆ ಆನ್ಲೈನ್ ಬೆಟ್ಟಿಂಗ್ ದಂಧೆ ಬಂದ್: ಹೆಚ್.ಡಿ.ಕುಮಾರಸ್ವಾಮಿ

Prasthutha|

►‘ಹಳ್ಳಿ ಮಕ್ಕಳನ್ನು ಹಾಳು ಮಾಡುತ್ತಿರುವ ಅನಿಷ್ಟಗಳನ್ನು ತೊಲಗಿಸುವೆ’

- Advertisement -

ಲಿಂಗಸುಗೂರು: ಬೆಟ್ಟಿಂಗ್ ದಂಧೆಯಿಂದಾಗಿ ಹಳ್ಳಿಯ ಮಕ್ಕಳು ಬೀದಿಪಾಲಾಗುತ್ತಿದ್ದಾರೆ. ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬಂದರೆ ಆನ್ಲೈನ್ ಬೆಟ್ಟಿಂಗ್ ದಂಧೆಯನ್ನು ಸಂಪೂರ್ಣವಾಗಿ ಬಂದ್ ಮಾಡಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ರಾಯಚೂರು ಜಿಲ್ಲೆಯ ಲಿಂಗಸಗೂರು ಪಟ್ಟಣದಲ್ಲಿ ಜೆಡಿಎಸ್ ಅಭ್ಯರ್ಥಿ ಸಿದ್ದುಬಂಡಿ ಪರವಾಗಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಬೆಟ್ಟಿಂಗ್ ಇತ್ಯಾದಿ ದಂಧೆಗಳಿಂದ ಬಡವರ ಮಕ್ಕಳು, ಹಳ್ಳಿಯ ಮಕ್ಕಳು ಕೂಡ ಹಾಳಾಗುತ್ತಿದ್ದಾರೆ. ಶೈಕ್ಷಣಿಕವಾಗಿ ಅವರ ಭವಿಷ್ಯವನ್ನು ಭದ್ರ ಮಾಡಬೇಕಿದೆ. ನಮ್ಮ ಪಕ್ಷ ಅಧಿಕಾರಕ್ಕೆ ಬಂದ ಕೂಡಲೇ ಇಂಥ ಅನಿಷ್ಟಗಳನ್ನು ತೊಳಗಿಸುತ್ತೇನೆ ಎಂದ ಅವರು, ಹಿಂದೆ ತಾಯಂದಿರು ಸಾರಾಯಿ ನಿಷೇಧ ಮಾಡಿ ಎಂದರು. ಅವರ ಕಷ್ಟಕ್ಕೆ ಪರಿಹಾರವಾಗಿ ಸಾರಾಯಿ ನಿಷೇಧ ಮಾಡಿದೆ. ಒಂದಂಕಿ ಲಾಟರಿ ನಿಷೇಧ ಮಾಡಿದೆ. ನಾನು ಸರಕಾರ ಮಾಡಿದ ಸಂದರ್ಭದಲ್ಲಿ ತಾಯಂದಿರು, ಅಕ್ಕತಂಗಿಯರ ಬೇಡಿಕೆ ಈಡೇರಿಸಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ ಹೇಳಿದರು.

- Advertisement -

ನಾನು ಕೇವಲ ರಾಜಕೀಯ ಭಾಷಣ ಮಾಡಿ, ಇನ್ನೊಬ್ಬರನ್ನು ನಿಂದನೆ ಮಾಡಲು ಬಂದಿಲ್ಲ. ನನ್ನ ಯೋಜನೆಗಳನ್ನು ಜನರ ಮುಂದಿಟ್ಟು ಮತ ಕೇಳಲು ಬಂದಿದ್ದೇನೆ. ಇವತ್ತು ಕಾಂಗ್ರೆಸ್ ನಾಯಕರು ಪ್ರಣಾಳಿಕೆ ಬಿಡುಗಡೆ ಮಾಡಿದ್ದಾರೆ. ಈ ನಾಡಿನ ಜನತೆಗೆ ಬೇಡುವ ಸ್ಥಿತಿ ತಂದೊಡ್ಡುವ ರೀತಿ ಇದೆ ಆ ಪ್ರಣಾಳಿಕೆ. ನಮ್ಮ ಪಂಚರತ್ನ ಕಾರ್ಯಕ್ರಮ ಹಾಗಲ್ಲ, ಎಲ್ಲರೂ ಸದೃಢವಾಗಿ ಇರಬೇಕು, ಪ್ರತಿ ಕುಟುಂಬವೂ  ಸ್ವಾಭಿಮಾನದಿಂದ ಬದುಕುವಂತೆ ಶಕ್ತಿ ತುಂಬಲಿದೆ. ಒಂದೇ ಒಂದು ಬಾರಿ ಪರೀಕ್ಷೆ ಮಾಡಿ. ನಿಮ್ಮ ಕಷ್ಟಗಳಿಗೆ ಮುಕ್ತಿ ಕೊಡ್ತೇನೆ. ನಾನು ಹೇಳಿದಂತೆ ಮಾಡದಿದ್ದರೆ ಇನ್ನೆಂದು ನಿಮ್ಮೆದುರು ಬರೋದಿಲ್ಲ ಎಂದು ಅವರು ಮನವಿ ಮಾಡಿದರು.

5 ವರ್ಷದ ಆಡಳಿತದ ಸರ್ಕಾರವನ್ನು ಜನತಾದಳಕ್ಕೆ ಕೊಡಿ. ನೀವು ಮೆಚ್ಚುವ ಆಡಳಿತ ಕೊಡುತ್ತೇನೆ. ಅಧಿಕಾರಕ್ಕೇರಿ ನಾನು ಮುಖ್ಯಮಂತ್ರಿ ಆಗಿ ಮೆರೆಯಬೇಕು ಅಂತಲ್ಲ. ಎಲ್ಲರೂ ನೆಮ್ಮದಿಯಿಂದ ಬಾಳುವಂತ ಸರಕಾರ ಕೊಡುತ್ತೇನೆ. ಶ್ರೀಮಂತ ಮಕ್ಕಳಿಗೆ ಸಮಾನವಾದ ಶಿಕ್ಷಣವನ್ನು ಬಡವರ ಮಕ್ಕಳೂ ಪಡೆಯಬೇಕು. ಬಡವರ ಮಕ್ಕಳಿಗೂ ಇಂಗ್ಲೀಷ್ ಮಾಧ್ಯಮದಲ್ಲಿ ಶಿಕ್ಷಣ ನೀಡ್ತೇವೆ ಎಂದು ಕುಮಾರಸ್ವಾಮಿ ಅವರು ನುಡಿದರು.

ಜೆಡಿಎಸ್ ಸರಕಾರ ಬಂದರೆ ಎಂತಹ ಮಾರಣಾಂತಿಕ ಕಾಯಿಲೆ ಬಂದರೂ ಉಚಿತ ಚಿಕಿತ್ಸೆ ಸಿಗಲಿದೆ. ಅಪರೂಪದ ಖಾಯಿಲೆಯಿಂದ ಬಳಲುತ್ತಿರುವವರಿಗೆ ಕೂಡ ಚಿಕಿತ್ಸೆ ಕೊಡಿಸುತ್ತೇವೆ. ನಾನು ಜಾತಿ-ಧರ್ಮ ನೋಡೋದಿಲ್ಲ. ಸರ್ವರಿಗೂ ಒಳ್ಳೆಯದಾಗಬೇಕು, ಸಮಾನ ಸೌಲಭ್ಯಗಳು ಸಿಗಬೇಕು. ಇದೇ ನನ್ನ ಆಶಯ. ಸರ್ವ ಜನಾಂಗದ ಶಾಂತಿಯ ತೋಟ ನಿರ್ಮಾಣವೇ ನನ್ನ ಗುರಿ ಎಂದು ಕುಮಾರಸ್ವಾಮಿ ಅವರು ಒತ್ತಿ ಹೇಳಿದರು.

ನೀರಾವರಿ ಯೋಜನೆಗಳನ್ನು ಆದ್ಯತೆಯ ಮೇರೆಗೆ ಕಾರ್ಯಗತ ಮಾಡುತ್ತೇವೆ. ಜನತಾ ಜಲಧಾರೆ ಹೆಸರಿನಲ್ಲಿ ಯೋಜನೆ ರೂಪಿಸಿದ್ದೇವೆ. ಕೃಷಿ, ನೀರಾವರಿಗೆ ಸಮೃದ್ಧ ನೀರು ಕೊಡುವುದು ನಮ್ಮ ಬದ್ಧತೆ. ಅದನ್ನು ಮಾಡಿ ತೋರಿಸುತ್ತೇವೆ.

ಜಮೀನಿಲ್ಲದ ಕೂಲಿ ಕಾರ್ಮಿಕರಿಗೆ ಪ್ರತಿ ತಿಂಗಳು 2 ಸಾವಿರ ರೂಪಾಯಿ ಕೊಡುತ್ತೇವೆ. ವೃದ್ಧಾಪ್ಯ ವೇತನವಾಗಿ ತಿಂಗಳಿಗೆ 5 ಸಾವಿರ ನೀಡಲಾಗುವುದು. ಈ ನಾಡಿನ ಬಡತನ ಹೋಗಲಾಡಿಸಲು ಜನತಾ ಸರ್ಕಾರ ತನ್ನಿ ಎಂದು ಜನರನ್ನು ಮಾಜಿ ಮುಖ್ಯಮಂತ್ರಿಗಳು ಕೋರಿದರು.

ಸಿದ್ದುಬಂಡಿ ಧೈರ್ಯ ಹೇಳಿದ ಮಾಜಿ ಸಿಎಂ:

ಚುನಾವಣೆಗೆ ವಿರೋಧಿ ಪಕ್ಷಗಳ ಹಣವನ್ನು ನೀರಿನಂತೆ ಚೆಲ್ಲುತ್ತಿದ್ದಾರೆ. ನಾನು ದುಡ್ಡನ್ನ ಎಲ್ಲಿಂದ ತರಲಿ ಅಂತಾ ಸಿದ್ದುಬಂಡಿ ಕಣ್ಣೀರು ಹಾಕುತ್ತಿದ್ದಾರೆ ಎಂದ ಕುಮಾರಸ್ವಾಮಿ ಅವರು, ಸಿದ್ದುಬಂಡಿಗೆ ನಾನು ಸಮಾಧಾನ ಹೇಳಿದ್ದೇನೆ. ಧೈರ್ಯ ತುಂಬಿದ್ದೇನೆ. ಜನರೇ ನಿಮ್ಮ ಆಸ್ತಿ ಅಂತಾ ಅವರಿಗೆ ಹೇಳಿ ಸಮಾಧಾನಪಡಿಸಿದ್ದೇನೆ ಎಂದರು.

ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ, ಪಕ್ಷದ ಕಾರ್ಯಾಧ್ಯಕ್ಷ ಆಲ್ಕೊಡ್ ಹನುಮಂತಪ್ಪ, ಮಾಜಿ ಸಚಿವ ಹಾಗೂ ಸಿಂಧನೂರು ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ವೆಂಕಟರಾವ್ ನಾಡಗೌಡ ಸೇರಿದಂತೆ ಅನೇಕ ಹಿರಿಯ ನಾಯಕರು, ಸ್ಥಳೀಯ ಮುಖಂಡರು ಹಾಜರಿದ್ದರು.